ನವದೆಹಲಿ: ನ್ಯಾಯಾಂಗ, ಚುನಾವಣಾ ಆಯೋಗ, ಪೆಗಾಸಸ್ ಇವೆಲ್ಲವೂ ರಾಜ್ಯಗಳ ಒಕ್ಕೂಟದ ಧ್ವನಿಯನ್ನು ನಾಶಪಡಿಸುವ ಸಾಧನಗಳಾಗಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗದುಕೊಂಡಿದ್ದಾರೆ.
‘ನ್ಯಾಯಾಂಗ, ಚುನಾವಣಾ ಆಯೋಗ, ಪೆಗಾಸಸ್, ಇವೆಲ್ಲವೂ ರಾಜ್ಯಗಳ ಒಕ್ಕೂಟದ ಧ್ವನಿಯನ್ನು ನಾಶಪಡಿಸುವ ಸಾಧನಗಳಾಗಿವೆ’ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಲೋಕಸಭೆಯಲ್ಲಿ 2022 ರ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡುತ್ತಾ ಹೇಳಿದ್ದಾರೆ.
ಆದರೆ, ಚುನಾವಣಾ ಆಯೋಗ ಮತ್ತು ನ್ಯಾಯಾಂಗದ ಬಗ್ಗೆ ರಾಹುಲ್ ಗಾಂಧಿಯವರ ಟೀಕೆಗಳ ನಂತರ, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಹಿಂದಿನ ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು.
ಈ ಕುರಿತು ಟ್ವಿಟರ್‌ನಲ್ಲಿ ಟ್ವೀಟ್ ಮಾಡಿರುವ ರಿಜಿಜು, ‘ಭಾರತದ ಕಾನೂನು ಸಚಿವರಾಗಿ ಮಾತ್ರವಲ್ಲದೆ ಒಬ್ಬ ಸಾಮಾನ್ಯ ನಾಗರಿಕನಾಗಿಯೂ ನಾನು ಭಾರತದ ನ್ಯಾಯಾಂಗ ಮತ್ತು ಚುನಾವಣಾ ಆಯೋಗದ ಬಗ್ಗೆ ರಾಹುಲ್ ಗಾಂಧಿ ಹೇಳಿರುವುದನ್ನು ಖಂಡಿಸುತ್ತೇನೆ. ನ್ಯಾಯಾಂಗ ಮತ್ತು ಚುನಾವಣಾ ಆಯೋಗ ನಮ್ಮ ಪ್ರಜಾಪ್ರಭುತ್ವದ ಪ್ರಮುಖ ಸಂಸ್ಥೆಗಳಾಗಿವೆ. ರಾಹುಲ್ ಗಾಂಧಿ ತಕ್ಷಣವೇ ಜನರ ಕ್ಷಮೆಯಾಚಿಸಬೇಕು. ಎಂದು ಒತ್ತಾಯಿಸಿದ್ದಾರೆ.
ಚೀನಾ, ಪಾಕಿಸ್ತಾನ, ಪೆಗಾಸಸ್ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಚೀನಿಯರು ಏನು ಮಾಡಬೇಕೆಂಬುದರ ಬಗ್ಗೆ ಸ್ಪಷ್ಟ ದೃಷ್ಟಿ ಹೊಂದಿದ್ದಾರೆ ಎಂದು ಹೇಳಿದರು. ಭಾರತದ ವಿದೇಶಾಂಗ ನೀತಿಯ ಏಕೈಕ ದೊಡ್ಡ ಕಾರ್ಯತಂತ್ರದ ಗುರಿ ಪಾಕಿಸ್ತಾನ ಮತ್ತು ಚೀನಾವನ್ನು ಪ್ರತ್ಯೇಕವಾಗಿ ಇಡುವುದು. ನೀವು ಏನು ಮಾಡಿದ್ದೀರಿ, ನೀವು ಅವರನ್ನು ಒಟ್ಟಿಗೆ ಸೇರಿಸಿದ್ದೀರಿ ಎಂದು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
‘ಯಾವುದೇ ಭ್ರಮೆಗೆ ಒಳಗಾಗಬೇಡಿ, ನಿಮ್ಮ ಮುಂದೆ ನಿಂತಿರುವ ಶಕ್ತಿಯನ್ನು ಕಡಿಮೆ ಅಂದಾಜು ಮಾಡಬೇಡಿ. ನೀವು ಪಾಕಿಸ್ತಾನ ಮತ್ತು ಚೀನಾವನ್ನು ಒಟ್ಟಿಗೆ ತಂದಿದ್ದೀರಿ. ಇದು ಭಾರತದ ಜನರ ವಿರುದ್ಧ ನೀವು ಮಾಡಬಹುದಾದ ಏಕೈಕ ದೊಡ್ಡ ಅಪರಾಧ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
‘ಗಣರಾಜ್ಯೋತ್ಸವದಂದು ನಿಮಗೆ ಅತಿಥಿಯನ್ನು ಏಕೆ ಕರೆತರಲು ಸಾಧ್ಯವಾಗುತ್ತಿಲ್ಲ ಎಂದು ನೀವೇ ಕೇಳಿ. ಇಂದು ಭಾರತವು ಸಂಪೂರ್ಣವಾಗಿ ಪ್ರತ್ಯೇಕವಾಗಿದೆ. ನಾವು ಶ್ರೀಲಂಕಾ, ನೇಪಾಳ, ಬರ್ಮಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಚೀನಾ ದೇಶಗಳಿಂದ ಸುತ್ತುವರೆದಿದ್ದೇವೆ. ಎಲ್ಲೆಡೆ ಸುತ್ತುವರೆದ ನಮ್ಮ ವಿರೋಧಿಗಳು ನಮ್ಮ ಸ್ಥಾನ ಅರ್ಥಮಾಡಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.