ಬೆಂಗಳೂರು: ಲೋಕಸಭಾ ಚುನಾವಣೆ ಮತ ಎಣಿಕೆಗೆ ಸಿದ್ಧತೆ ನಡೆದಿದೆ. ಜೂನ್ 4ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಈ ನಡುವೆ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ರಾಜ್ಯದ ಎಲ್ಲಾ 28 ಲೊಕಸಭಾ ಕ್ಷೇತ್ರದ ಮತ ಎಣಿಕೆ ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ. ಚುನಾವಣಾ ಅಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳು ಈಗಾಗಲೇ ಸಿದ್ಧತೆ ನಡೆಸಿದ್ದಾರೆ. ಫಲಿತಾಂಶ ಪ್ರಕಟವಾಗುವ ಮುನ್ನವೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಮತ ಎಣಿಕೆ ಕೇಂದ್ರದಲ್ಲಿ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹಾಲಿ ಸಂಸದ ಡಿ.ಕೆ.ಸುರೇಶ್ ವಿರುದ್ಧ ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಡಾ.ಮಂಜುನಾಥ್ ಕಣಕ್ಕಿಳಿದ್ದು, ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ಈಬಾರಿ ಬಿಜೆಪಿ ಅಭ್ಯರ್ಥಿ ಗೆಲುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಫಲಿತಾಂಶ ಕುತೂಹಲ ಮೂಡಿಸಿದೆ.
ಈ ನಿಟ್ಟಿನಲ್ಲಿ ಮತಎಣಿಕೆ ಕೇಂದ್ರದ ಬಳಿ ಭದ್ರತಾಪಡೆಗಳ ನಿಯೋಜನೆ ಮಾಡಬೇಕು. ಹೆಚ್ಚುವರಿ ಪೊಲೀಸ್ ಹಾಗೂ ಅರೆಸೇನಾ ಪಡೆಗಳ ನಿಯೋಜನೆ ಮಾಡಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಯಾವುದೇ ವ್ಯಕ್ತಿ ಅನಧಿಕೃತ ಪ್ರವೇಶ ಅಥವಾ ನಿಯಮ ಉಲ್ಲಂಘನೆ ಪ್ರಯತ್ನ ನಡೆಸಿದಲ್ಲಿ ಭದ್ರತಾ ಸಿಬ್ಬಂದಿ ತಡೆಯಬೇಕು. ಪಕ್ಷದ ಏಜೆಂಟರು ಸೇರಿದಂತೆ ಮತ ಎಣಿಕೆ ಕೇಂದ್ರ ಪ್ರವೇಶಿಸುವ ಎಲ್ಲರನ್ನೂ ಸಂಪೂರ್ಣ ತಪಾಸಣೆ ನಡೆಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.