ನವದೆಹಲಿ: ಮತದಾರರ ಪಟ್ಟಿಯನ್ನು ಆಧಾರ್ ನೊಂದಿಗೆ ಜೋಡಣೆ ಮಾಡಲು ಮತ್ತೊಮ್ಮೆ ಮಹತ್ವದ ಚರ್ಚೆ ನಡೆದಿದೆ.
ಆಧಾರ್ ಮತ್ತು ಮತದಾರರ ಪಟ್ಟಿಯನ್ನು ಜೋಡಣೆ ಮಾಡುವುದರಿಂದ ಒಬ್ಬ ಮತದಾರ ವಿವಿಧೆಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದುವುದನ್ನು ತಪ್ಪಿಸಬಹುದು. ಹಲವೆಡೆ ಮತದಾರರ ಗುರುತಿನ ಚೀಟಿ ಪಡೆದುಕೊಳ್ಳಲು ಕಡಿವಾಣ ಹಾಕಬಹುದಾಗಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು, ಚುನಾವಣೆ ಆಯೋಗ ಮತದಾರರ ಪಟ್ಟಿಯೊಂದಿಗೆ ಆಧಾರ್ ಜೋಡಣೆ ಮಾಡಲು ಪ್ರಸ್ತಾವ ಸಲ್ಲಿಸಿದ್ದು, ಸರ್ಕಾರದ ಪರಿಶೀಲನೆಯಲ್ಲಿದೆ. ಇದಕ್ಕಾಗಿ ಚುನಾವಣಾ ಕಾಯ್ದೆಯಲ್ಲಿ ಅಗತ್ಯ ತಿದ್ದುಪಡಿ ತರಬೇಕಿದೆ ಎಂದು ಹೇಳಿದ್ದರು.
2019 ರ ಆಗಸ್ಟ್ ನಲ್ಲಿ ಈ ಕುರಿತಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮತದಾರರ ನೋಂದಣಿಗಾಗಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸುವವರು ಮತ್ತು ಈಗಾಗಲೇ ಮತದಾರರ ಪಟ್ಟಿಯಲ್ಲಿ ಇರುವವರ ಆಧಾರ್ ಸಂಖ್ಯೆ ಪಡೆದುಕೊಳ್ಳಲು ಚುನಾವಣಾ ಆಯೋಗದ ಅಧಿಕಾರಿಗಳಿಗೆ ಅಧಿಕಾರ ನೀಡಲು ಕಾನೂನಿಗೆ ತಿದ್ದುಪಡಿ ಆಗಬೇಕಿದೆ.
2015 ರ ಆಗಸ್ಟ್ ನಲ್ಲಿ ಈ ಕುರಿತಾದ ಯೋಜನೆಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಆಧಾರ್ ಸಂಖ್ಯೆಯನ್ನು ಪಡೆಯಲು ಕಾನೂನಿನ ಅನುಮತಿ ಅಗತ್ಯವೆಂದು ಸುಪ್ರೀಂಕೋರ್ಟ್ ಆದೇಶದಲ್ಲಿ ಸ್ಪಷ್ಟಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕಾನೂನಿನಲ್ಲಿ ಬದಲಾವಣೆ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿರುವುದನ್ನು ಕೇಂದ್ರ ಸರ್ಕಾರ ಪರಿಶೀಲನೆ ನಡೆಸಿದೆ ಎಂದು ಹೇಳಲಾಗಿದೆ
ಕೇಂದ್ರ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಚುನಾವಣೆ ಸುಧಾರಣೆಯ ಬಗ್ಗೆ ಕ್ರಮಕೈಗೊಳ್ಳಲು ರವಿಶಂಕರ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದಾರೆ. ಪ್ರಮಾಣ ಪತ್ರದ ತಪ್ಪು ಮಾಹಿತಿಗೆ ಎರಡು ವರ್ಷ ಸಜೆ ಸೇರಿದಂತೆ ಹಲವು ವಿಚಾರಗಳು ಪ್ರಸ್ತಾವನೆಯಲ್ಲಿವೆ ಎನ್ನಲಾಗಿದೆ.