ಬಳ್ಳಾರಿ: ದಾಖಲೆಯಿಲ್ಲದೆ ಸಾಗಿಸುತ್ತಿದ್ದ 27.50 ಲಕ್ಷ ರೂಪಾಯಿ ಹಣವನ್ನು ಚುನಾವಣಾ ಅಧಿಕಾರಿಗಳು ಭಾನುವಾರ ವಶಕ್ಕೆ ಪಡೆದುಕೊಂಡಿದ್ದಾರೆ. ಹಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.
ಹರಪನಹಳ್ಳಿ ಕಡೆಯಿಂದ ಆಗಮಿಸುತ್ತಿದ್ದ ಕಾರ್ ಅನ್ನು ಕರ್ನಾಟಕ -ಆಂಧ್ರಪ್ರದೇಶ ಗಡಿಯಲ್ಲಿ ಬರುವ ಜಿ. ಬಸಾಪುರ ಚೆಕ್ ಪೋಸ್ಟ್ ನಲ್ಲಿ ತಡೆಯಲಾಗಿದೆ. ಕಾರ್ ನಲ್ಲಿ ಇದ್ದ ನಾಲ್ವರ ಬಳಿ ಹಣ ಪತ್ತೆಯಾಗಿದೆ ಎಂದು ಕ್ಷೇತ್ರ ಚುನಾವಣೆ ಅಧಿಕಾರಿ ಹೆಚ್.ಡಿ. ರಾಜೇಶ್ ತಿಳಿಸಿದ್ದಾರೆ.
10 ಲಕ್ಷ ರೂಪಾಯಿವರೆಗಿನ ಹಣವನ್ನು ಮಾತ್ರ ನಾವು ಜಪ್ತಿ ಮಾಡಲು ಅವಕಾಶವಿದ್ದು, ಅದಕ್ಕಿಂತ ಹೆಚ್ಚಿನ ಪ್ರಮಾಣದ ಹಣವನ್ನು ತೆರಿಗೆ ಇಲಾಖೆಯೇ ಜಪ್ತಿ ಮಾಡಬೇಕಿದೆ. ಹೀಗಾಗಿ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಉಪ ಚುನಾವಣೆಯಲ್ಲಿ ಭಾರಿ ಪ್ರಮಾಣದಲ್ಲಿ ಹಣ ಹರಿದಾಡುತ್ತಿದೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಎಲ್ಲೆಡೆ ಹದ್ದಿನ ಕಣ್ಣು ಇಟ್ಟಿದ್ದಾರೆ.