ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗಳಿಗೆ ಇನ್ನು ಕೆಲ ದಿನಗಳಲ್ಲಿಯೇ ಮತದಾನ ನಡೆಯಲಿದ್ದು, ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರ ಕಾರ್ಯ ನಡೆಸುತ್ತಿವೆ.
ಅದರಲ್ಲೂ ಗುಜರಾತಿನಲ್ಲಿ ಆಡಳಿತರೂಢ ಬಿಜೆಪಿ ಈ ಬಾರಿಯೂ ಅಧಿಕಾರದ ಗದ್ದುಗೆಗೇರಬೇಕೆಂಬ ಕಾರಣಕ್ಕಾಗಿ ಸಾಕಷ್ಟು ಕಸರತ್ತು ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಘಟಾನುಘಟಿ ನಾಯಕರುಗಳು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯ ನಡೆಸಿದ್ದಾರೆ.
ಇದರ ಮಧ್ಯೆ ಗುಜರಾತಿನ ರಾಜ್ ಕೋಟ್ ಜಿಲ್ಲೆಯ ಗ್ರಾಮ ಒಂದು ವಿಶಿಷ್ಟ ಕಾರಣಕ್ಕಾಗಿ ಎಲ್ಲರ ಗಮನ ಸೆಳೆಯುತ್ತಿದೆ. ರಾಜ್ ಕೋಟ್ ನಿಂದ ಕೇವಲ 20 ಕಿಮೀ ದೂರದಲ್ಲಿರುವ ರಾಜ್ ಸಮಾಧಿಯಾಲ ಗ್ರಾಮದಲ್ಲಿ ಮತ ಚಲಾಯಿಸದವರಿಗೆ ದಂಡ ವಿಧಿಸಲಾಗುತ್ತದೆ.
ಈ ಗ್ರಾಮದ ಮತದಾರರು ಕಡ್ಡಾಯವಾಗಿ ಮತ ಚಲಾವಣೆ ಮಾಡಬೇಕೆಂಬ ನಿಯಮವಿದ್ದು, ಸಕಾರಣವಿಲ್ಲದೆ ಇದನ್ನು ಉಲ್ಲಂಘಿಸಿದವರಿಗೆ 51 ರೂಪಾಯಿಗಳ ದಂಡ ವಿಧಿಸಲಾಗುತ್ತದೆ. ಮತ್ತೊಂದು ಮಹತ್ವದ ಸಂಗತಿ ಎಂದರೆ 1983 ರಿಂದ ಈ ಗ್ರಾಮದಲ್ಲಿ ಯಾವುದೇ ಪಕ್ಷಕ್ಕೆ ಪ್ರಚಾರಕ್ಕೆ ಅವಕಾಶ ನೀಡಿಲ್ಲ.