ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಯಿಂದ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡ ಹಣದಲ್ಲಿ 20 ಕೋಟಿ ರೂ.ಗೂ ಹೆಚ್ಚು ಹಣವನ್ನು ಲೋಕಸಭೆ ಚುನಾವಣೆಗೆ ಮಾಜಿ ಸಚಿವ ಬಿ. ನಾಗೇಂದ್ರ ಬಳಸಿಕೊಂಡಿದ್ದಾರೆ. ತಾವು ಉಸ್ತುವಾರಿ ಹೊತ್ತಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಹಣ ಖರ್ಚು ಮಾಡಿದ್ದಾರೆ. ಅಕ್ರಮ ಹಣ ವರ್ಗಾವಣೆಗೆ ನಾಗೇಂದ್ರ ಅವರೇ ಸೂತ್ರದಾರ ಎಂಬುದನ್ನು ಇಡಿ ಪತ್ತೆ ಮಾಡಿದ್ದು, ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ ಎನ್ನಲಾಗಿದೆ.
ನಾಗೇಂದ್ರ ಅವರನ್ನು ಬಂಧಿಸಿದ ನಂತರ ಇಡಿ ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಬೆಂಗಳೂರಿನಿಂದ ಹೈದರಾಬಾದ್ ಬ್ಯಾಂಕ್ ಖಾತೆಗೆ ಅಲ್ಲಿಂದ ಸೊಸೈಟಿಗೆ ವರ್ಗಾವಣೆ ಆಗಿರುವ ಹಣ ಎಲ್ಲೆಲ್ಲಿಗೆ ಹೋಗಿದೆ ಎಂಬ ಮಾಹಿತಿಯನ್ನು ಇಡಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಸೊಸೈಟಿ ಖಾತೆಯಿಂದ ವಿವಿಧ ಕಂಪನಿಗಳು, ಆಭರಣ, ಮದ್ಯದ ಅಂಗಡಿಗಳಿಗೆ ಹೋಗಿ ಅಲ್ಲಿಂದ ಕೈ ಬದಲಾವಣೆಯಾಗಿದೆ. ಈ ಹಣ ಚುನಾವಣೆ ವೆಚ್ಚಕ್ಕೆ ಬಳಕೆಯಾಗಿದೆ ಎಂದು ಇಡಿ ಮಾಹಿತಿ ನೀಡಿದೆ.