ಮನೆಯವರಿಗೆ ಸೋಂಕು ತಗುಲಬಾರದು ಎಂಬ ಕಾರಣಕ್ಕಾಗಿ, ಕೊರೋನಾ ವೈರಸ್ ತಗುಲಿರುವ ವೃದ್ಧೆಯೊಬ್ಬರನ್ನ ಆಕೆಯ ಕುಟುಂಬದವರೇ ಮನೆಯಿಂದ ಹೊರ ಹಾಕಿ ಮರದ ಕೆಳಗೆ ಕ್ವಾರಂಟೈನ್ ಮಾಡಿದ್ದಾರೆ. ಈ ಘಟನೆ ಆಸ್ಟ್ರೇಲಿಯಾದ ಯುಯೆನ್ಡುಮು ಪಟ್ಟಣದಲ್ಲಿ ನಡೆದಿದೆ.
ಈ ವಯಸ್ಸಾದ ಮಹಿಳೆಯನ್ನು ಮತ್ತೊಬ್ಬ ಮಹಿಳೆ ನೋಡಿಕೊಳ್ಳುತ್ತಾರೆ. ಈ ಮಹಿಳೆಗೆ ಅಂಬೆಗಾಲಿಡುವ ಪುಟ್ಟ ಮಗುವಿನ ಜೊತೆ ಡಯಾಲಿಸಿಸ್‌ನಲ್ಲಿರುವ ತನ್ನ ಗಂಡನನ್ನು ನೋಡಿಕೊಳ್ಳುವ ಜವಾಬ್ದಾರಿ ಇದೆ. ಹೀಗಾಗಿ ಮಗು ಹಾಗೂ ಮೊದಲೇ ರೋಗಿಯಾಗಿರುವ ಗಂಡನಿಗೆ ಸೋಂಕು ತಗುಲಬಾರದೆಂದು ಸೋಂಕಿತ ವೃದ್ಧೆಯನ್ನ ಮನೆಯ ಹೊರಗಿನ ಮರದ ಕೆಳಗೆ ಕ್ವಾರಂಟೈನ್ ಮಾಡಲಾಗಿದೆ. ನಾನು ಮೊದಲ ದಿನದಿಂದಲು ಸ್ಥಳೀಯ ಅಧಿಕಾರಿಗಳನ್ನ ಕ್ವಾರಂಟೈನ್ ಸೌಲಭ್ಯಕ್ಕಾಗಿ ಸಂಪರ್ಕಿಸುತ್ತಿದ್ದೀನಿ. ಆದರೆ ಕ್ವಾರಂಟೈನ್ ಸೌಲಭ್ಯ ಸಿಗುತ್ತಿಲ್ಲ ಎಂದು ಮಹಿಳೆ ಹೇಳಿದ್ದಾರೆ.
ವೃದ್ಧೆಯನ್ನು ಹೊರ ಹಾಕಿರುವುದನ್ನು ಸಮರ್ಥಿಸಿಕೊಂಡಿರುವ ಆಕೆ ಸರ್ಕಾರದ ಮೇಲೆ ಗೂಬೆ ಕೂರಿಸಿದ್ದಾರೆ. ನಮ್ಮ ಪ್ರದೇಶದಲ್ಲಿ ಎಲ್ಲೋ ಒಂದು ಕ್ವಾರಂಟೈನ್ ಸ್ಥಳವಿದೆ. ದೊಡ್ಡ ಮನೆಯಿರುವ ಅಥವಾ ಕಡಿಮೆ ಜನರಿರುವವರು ತಮ್ಮ ತಮ್ಮ ಮನೆಗಳಲ್ಲಿ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ನಮ್ಮಂತ ಹೆಚ್ಚು ಜನರಿರುವ ಮನೆಯಲ್ಲಿ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುವುದು ಸಾಧ್ಯವಿಲ್ಲ. ಇದರಿಂದ ಉಳಿದವರಿಗು ಸೋಂಕು ಹರಡುತ್ತದೆ ಎಂದಿದ್ದಾರೆ.
ಆರೋಗ್ಯಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಅವರು ಯಾವುದನ್ನು ನಿಖರವಾಗಿ ಹೇಳಿಲ್ಲ. ಸರ್ಕಾರದ ಈ ನಿಯಮಗಳಿಂದ ಗೊಂದಲ, ಒತ್ತಡವಾಗುತ್ತಿದೆ ಎಂದಿರುವ ಆಕೆ, ಕ್ವಾರಂಟೈನ್ ಆಗಲೂ ಪರ್ಯಾಯ ಜಾಗದ ವ್ಯವಸ್ಥೆ ಮಾಡಿಕೊಡಿ ಎಂದು ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಮನೆಯಲ್ಲಿ ಜಾಗವಿರದಿದ್ದರೆ ಸೋಂಕಿತ ಜನರನ್ನ ಅಂಗಳದಲ್ಲಿರಿಸಿ ಪ್ರತ್ಯೇಕ ಮಾಡುವುದರಲ್ಲಿ ಏನು ತಪ್ಪಿಲ್ಲಾ ಎಂದು ತನ್ನ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಸೋಂಕಿಗೆ ತುತ್ತಾದವರು ಮನೆಯಲ್ಲಿಯೆ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುವ ಪದ್ಧತಿ ಜನಪ್ರಿಯವಾಗಿದೆ. ಇದರಿಂದ ಕ್ವಾರಂಟೈನ್ ಹಾಗೂ ಚಿಕಿತ್ಸೆ ನೀಡುವ ಸ್ಥಳಗಳನ್ನ ಸರ್ಕಾರ ಹೆಚ್ಚಾಗಿ ಸ್ಥಾಪಿಸಿಲ್ಲ. ಈ ಘಟನೆ ನೋಡಿದ ಹಲವರು ಸರ್ಕಾರದ “ನಗರ ಕ್ವಾರಂಟೈನ್ ಮಾದರಿ” ಸರಿಯಾಗಿಲ್ಲ, ಪರ್ಯಾಯ ವ್ಯವಸ್ಥೆಯಾಗಬೇಕು ಎನ್ನುತ್ತಿದ್ದಾರೆ.