ಪಾರ್ಕಿಂಗ್ ವಿಚಾರಕ್ಕೆ ನೆರೆಮನೆಯವರು ವೃದ್ಧರೊಬ್ಬರನ್ನ ಥಳಿಸಿ, ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಮೃತರ ನೆರೆಮನೆಯಲ್ಲಿ ವಾಸವಾಗಿದ್ದ ಕುಮಾರನ್ ಹಾಗೂ ಅವನ ಕುಟುಂಬದ ಇತರ ಸದಸ್ಯರು, ಮನೆಗೆ ನುಗ್ಗಿ ಮೃತರು ಹಾಗೂ ಅವರ ಕುಟುಂಬ ಸದಸ್ಯರ ಮೇಲೆ ದೊಣ್ಣೆ ಮತ್ತು ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಚೆನ್ನೈನ ಪುಝಲ್ ಪಟ್ಟಣದಲ್ಲಿ ಕಾರ್ ಪಾರ್ಕಿಂಗ್ ಗದ್ದಲದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು 62 ವರ್ಷದ ಭರತ ರಾಮರ್ ಎಂದು ಗುರುತಿಸಲಾಗಿದೆ. ತಲೆಗೆ ತೀವ್ರವಾದ ಪೆಟ್ಟು ಬಿದ್ದು ಗಾಯಗೊಂಡಿದ್ದ ಅವರನ್ನ ಸರ್ಕಾರಿ ಸ್ಟಾನ್ಲಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಅಸುನೀಗಿದ್ದಾರೆಂದು ತಿಳಿದುಬಂದಿದೆ.
ಇತ್ತೀಚೆಗೆ ಪುಝಲ್‌ನಲ್ಲಿ ಹೊಸ ಮನೆಗೆ ತೆರಳಿದ ರಾಮರ್ ಕುಟುಂಬ, ಜನವರಿ 26 ರಂದು ಗೃಹಪ್ರವೇಶ ಸಮಾರಂಭವನ್ನು ನಡೆಸಿದರು. ಮೃತ ಭರತ ಅವರು ನಮ್ಮ ಮನೆಮುಂದೆ ವಾಹನ ನಿಲ್ಲಿಸಬೇಡಿ ಎಂದು ಅನೇಕ ಬಾರಿ ಕೇಳಿಕೊಂಡಿದ್ದರಂತೆ. ಬಹುಶಃ ಇದರಿಂದ ಕೆರಳಿದ ಆರೋಪಿಗಳು ಈ ರೀತಿಯ ಕೃತ್ಯ ಎಸಗಿದ್ದಾರೆ. ಘಟನೆ ನಡೆದ ಆರಂಭದಲ್ಲಿ ಪುಝಲ್ ಪೊಲೀಸರು ಆರೋಪಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ನಂತರ ಅದನ್ನು ಕೊಲೆ ಪ್ರಕರಣವನ್ನಾಗಿ ಬದಲಾಯಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಫೆಬ್ರವರಿ 1 ರಂದು ಕುಮಾರನ್, ಭರತ ರಾಮರ್ ಅವರ ಮನೆಗೆ ನುಗ್ಗಿ ಅವರ ಕುಟುಂಬ ಸದಸ್ಯರ ಮೇಲೆ ದೊಣ್ಣೆ ಮತ್ತು ರಾಡ್‌ಗಳಿಂದ ಹಲ್ಲೆ ನಡೆಸಿದ್ದಾನೆ. ಸಧ್ಯ ಪೊಲೀಸರು ಕುಮಾರನ್ ನನ್ನು ಬಂಧಿಸಿದ್ದು, ಆತನ ಕುಟುಂಬಸ್ಥರಿಗಾಗಿ ಶೋಧ ನಡೆಸುತ್ತಿದ್ದಾರೆ. ಪೊಲೀಸರು ಎಲ್ಲಾ ಆರೋಪಿಗಳನ್ನು ಕೊಲೆ ಪ್ರಕರಣದಲ್ಲಿ ದಾಖಲಿಸಿದ್ದು, ಕುಮಾರನ್ ತಾಯಿ ಮಲಾರ್, ಸಂಬಂಧಿಕರಾದ ಅರುಣಗಿರಿ, ಪಳನಿ, ರೇವತಿ ಮತ್ತು ಸಂಗೀತಾಗಾಗಿ ಹುಡುಕಾಟ ನಡೆಸುತ್ತಿದ್ದಾರೆ.