ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಇತರ ರಾಜ್ಯಗಳಂತೆ ತಮ್ಮ ಶಾಸಕರ ಸಂಬಳ ಮತ್ತು ಭತ್ಯೆಗಳನ್ನು ಹೆಚ್ಚಿಸಲು ನಿರ್ಧರಿಸಿದ್ದಾರೆ. ಕೇಜ್ರಿವಾಲ್ ಕ್ಯಾಬಿನೆಟ್ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದಲ್ಲಿ ದೆಹಲಿ ಶಾಸಕರ ಸಂಬಳ ಮತ್ತು ಭತ್ಯೆ 54 ಸಾವಿರದ ಬದಲು 90 ಸಾವಿರವಾಗಲಿದೆ.
ದೆಹಲಿ ಶಾಸಕರು ಈವರೆಗೆ ಅತಿ ಕಡಿಮೆ ಸಂಭಾವನೆ ಪಡೆಯುತ್ತಿದ್ದಾರೆ. ಶಾಸಕರ ಸಂಬಳದ ವಿಷ್ಯದಲ್ಲಿ ತೆಲಂಗಾಣ ರಾಜ್ಯವು ಅಗ್ರಸ್ಥಾನದಲ್ಲಿದೆ. ಇಲ್ಲಿ ಶಾಸಕರು ತಿಂಗಳಿಗೆ ಒಟ್ಟು 2,50,000 ರೂಪಾಯಿ ಪಡೆಯುತ್ತಾರೆ. 20,000 ರೂಪಾಯಿ ಸಂಬಳವಾದ್ರೆ 2,30,000 ರೂಪಾಯಿ ಭತ್ಯೆ ಪಡೆಯುತ್ತಾರೆ.
ಉತ್ತರಾಖಂಡ ರಾಜ್ಯದ ಶಾಸಕರು ಅತಿ ಹೆಚ್ಚು ಸಂಬಳ ಮತ್ತು ಭತ್ಯೆಗಳನ್ನು ಪಡೆಯುವ ಶಾಸಕರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಒಟ್ಟು 1,98,000 ರೂಪಾಯಿ ಪಡೆಯುತ್ತಾರೆ. ಹಿಮಾಚಲ ಪ್ರದೇಶದ ಶಾಸಕರು ಮೂರನೇ ಸ್ಥಾನದಲ್ಲಿದ್ದು, ಅವರ ತಿಂಗಳ ಸಂಬಳ 1,90,000 ರೂಪಾಯಿ. ಕರ್ನಾಟಕ ಶಾಸಕರು ಪ್ರತಿ ತಿಂಗಳು 1,65,000 ರೂಪಾಯಿ ಸಂಭಾವನೆ ಪಡೆಯುತ್ತಾರೆ.
ಹರಿಯಾಣ ರಾಜ್ಯದ ಶಾಸಕರು ಪ್ರತಿ ತಿಂಗಳು 40 ಸಾವಿರ ವೇತನ ಸೇರಿದಂತೆ ಒಟ್ಟು 1,55,000 ರೂಪಾಯಿ ಪಡೆಯುತ್ತಾರೆ. ರಾಜಸ್ಥಾನದ ಶಾಸಕರು ಪ್ರತಿ ತಿಂಗಳು 40 ಸಾವಿರ ಸಂಬಳದೊಂದಿಗೆ 1,42,000 ರೂಪಾಯಿ ಸಂಭಾವನೆ ಪಡೆಯುತ್ತಾರೆ. ಬಿಹಾರದ ಶಾಸಕರು 1,30,000 ರೂಪಾಯಿ, ಗುಜರಾತ್ ಶಾಸಕರು 1,05,000 ರೂಪಾಯಿ ಸಂಭಾವನೆ ಪಡೆಯುತ್ತಾರೆ. ಉತ್ತರ ಪ್ರದೇಶ ಶಾಸಕರಿಗೆ ಪ್ರತಿ ತಿಂಗಳು 95 ಸಾವಿರ ರೂಪಾಯಿ ಸಂಭಾವನೆ ಸಿಗುತ್ತದೆ.