ನವದೆಹಲಿ: ಜಮ್ಮು ಮತ್ತು ಕಾಶ್ಮೀರ, ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಮತ ಎಣಿಕೆ ಕಾರ್ಯಕ್ಕೆ ಅಧಿಕಾರಿಗಳು, ಸಿಬ್ಬಂದಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಜಮ್ಮು ಕಾಶ್ಮೀರ ವಿಧಾನಸಭೆ 90 ಸದಸ್ಯ ಬಲ ಹೊಂದಿದೆ. ನಾಳೆ ನಡೆಯಲಿರುವ ಮತ ಎಣಿಕೆಗಾಗಿ ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. 2019 ರಲ್ಲಿ ಆರ್ಟಿಕಲ್ 370 ಮತ್ತು ಆರ್ಟಿಕಲ್ 35-ಎ ರದ್ದತಿಯ ನಂತರದ ಕೇಂದ್ರಾಡಳಿತ ಪ್ರದೇಶದಲ್ಲಿ ಇದು ಮೊದಲ ಚುನಾಯಿತ ಸರ್ಕಾರ ರಚನೆಗೆ ದಾರಿ ಮಾಡಿಕೊಟ್ಟಿದೆ.
ಹತ್ತು ವರ್ಷಗಳ ಅಂತರದ ನಂತರ ಇತ್ತೀಚೆಗೆ ಮೂರು ಹಂತಗಳಲ್ಲಿ ನಡೆದ ಚುನಾವಣೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮತದಾನವಾಗಿದ್ದು, ಜನರು ಉತ್ಸಾಹದಿಂದ ಮತದಾನದ ಹಕ್ಕನ್ನು ಚಲಾಯಿಸಿದರು ಮತ್ತು ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿದ್ದರು.
873 ಅಭ್ಯರ್ಥಿಗಳ ಭವಿಷ್ಯವನ್ನು ಇವಿಎಂಗಳಲ್ಲಿದೆ. ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೇರಲಿದೆ ಎಂದು ಸಮೀಕ್ಷೆ ಹೇಳಿವೆ. ನಾಳೆ ಮಧ್ಯಾಹ್ನದೊಳಗೆ ಫಲಿತಾಂಶ ಪ್ರಕಟವಾಗಲಿದ್ದು, ಸ್ಪಷ್ಟ ಚಿತ್ರಣ ಸಿಗಲಿದೆ.
ನಾಳೆ ಸುಭದ್ರ ಮತ್ತು ಸುಗಮ ಮತ ಎಣಿಕೆಗೆ ಅನುಕೂಲವಾಗುವಂತೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಪಾಂಡುರಂಗ ಕೆ. ಪೋಲ್ ತಿಳಿಸಿದ್ದಾರೆ.
ಹರಿಯಾಣ
ಹರಿಯಾಣದಲ್ಲಿ ಎಲ್ಲಾ 90 ವಿಧಾನಸಭಾ ಕ್ಷೇತ್ರಗಳಿಗೆ 90 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎಲ್ಲಾ 22 ಜಿಲ್ಲೆಗಳ ಜಿಲ್ಲಾ ಕೇಂದ್ರಗಳಲ್ಲಿ ಈ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಪಂಕಜ್ ಅಗರ್ವಾಲ್ ತಿಳಿಸಿದ್ದಾರೆ.
ಕಲ್ಕಾ ಮತ್ತು ಪಂಚಕುಲ ಕ್ಷೇತ್ರಗಳ ಮತಗಳನ್ನು ಪಂಚಕುಲದ ಮತ ಎಣಿಕೆ ಕೇಂದ್ರಗಳಲ್ಲಿ ಮತ್ತು ನಾರಾಯಣಗಢ, ಅಂಬಾಲಾ ಕಂಟೋನ್ಮೆಂಟ್, ಅಂಬಾಲಾ ನಗರ ಮತ್ತು ಮುಲ್ಲಾನಾ ಕ್ಷೇತ್ರಗಳಿಗೆ ನಡೆದ ಮತಗಳನ್ನು ಅಂಬಾಲಾದ ನಾಲ್ಕು ಎಣಿಕೆ ಕೇಂದ್ರಗಳಲ್ಲಿ ಎಣಿಕೆ ಮಾಡಲಾಗುವುದು, ಯಮುನಾನಗರ ಜಿಲ್ಲೆಯ ನಾಲ್ಕು ಸ್ಥಾನಗಳ ಮತಗಳನ್ನು ಯಮುನಾನಗರದ ಮತ ಎಣಿಕೆ ಕೇಂದ್ರಗಳಲ್ಲಿ ಎಣಿಕೆ ಮಾಡಲಾಗುವುದು.
ಅದೇ ರೀತಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಆ ಜಿಲ್ಲೆಯ ವಿಧಾನಸಭಾ ಸ್ಥಾನಗಳಿಗೆ ಸ್ಥಾಪಿಸಲಾಗಿರುವ ಮತ ಎಣಿಕೆ ಕೇಂದ್ರಗಳಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಅನುಗುಣವಾಗಿ ಮತ ಎಣಿಕೆ ನಡೆಯಲಿದೆ. ಎಲ್ಲಾ ಸ್ಟ್ರಾಂಗ್ ರೂಮ್‌ಗಳು ಸಿಸಿಟಿವಿ ಕಣ್ಗಾವಲಿನಲ್ಲಿವೆ. ವಿದ್ಯುನ್ಮಾನ ಮತಯಂತ್ರಗಳನ್ನು ಮೂರು ಹಂತದ ಭದ್ರತೆಯಲ್ಲಿ ಇರಿಸಲಾಗಿದೆ.
ಸ್ಟ್ರಾಂಗ್ ರೂಂಗಳ ಭದ್ರತೆಗಾಗಿ ಹರಿಯಾಣ ಪೊಲೀಸರು ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ನಾಳೆ ಬೆಳಗ್ಗೆ ಕೊಠಡಿ ಬಾಗಿಲು ತೆರೆಯಲಾಗುವುದು ಎಂದು ಅಗರ್ವಾಲ್ ತಿಳಿಸಿದ್ದಾರೆ. ಹರಿಯಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಆದರೆ, ಸಮೀಕ್ಷೆಯೇ ಸತ್ಯವಲ್ಲ, ನಿಖರ ಫಲಿತಾಂಶ ತಿಳಿಯಲು ನಾಳೆಯವರೆಗೆ ಕಾಯಬೇಕಿದೆ.