ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕೊಪ್ರಿ -ಪಚ್ಚಖಾಡಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಏಕನಾಥ್ ಸಂಭಾಜಿ ಶಿಂಧೆ ಈಗ ಮಹಾರಾಷ್ಟ್ರ ಮುಖ್ಯಮಂತ್ರಿ.
ಹಾಲಿ ನಗರಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಲೋಕೋಪಯೋಗಿ ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2004, 2009 ಮತ್ತು 2019 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. 2014ರಲ್ಲಿ ಕಲ್ಯಾಣ್ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದರು.
ಏಕನಾಥ ಶಿಂಧೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಜಾವಳಿ ಮೂಲದವರಾಗಿದ್ದಾರೆ. ಅವರ ತಂದೆಯ ಹೆಸರು ಸಾಂಭಾಜಿ ಶಿಂಧೆ. 1964ರ ಫೆಬ್ರವರಿ 9 ರಂದು ಜನಿಸಿದ ಏಕನಾಥ ಶಿಂಧೆ ಥಾಣೆಯಲ್ಲಿ 11ನೇ ತರಗತಿವರೆಗೆ ಓದಿದ್ದಾರೆ. ನಂತರ ಸಚಿವರಾಗಿ ಮುಕ್ತ ವಿವಿಯಲ್ಲಿ ಪದವಿ ಪಡೆದಿದ್ದಾರೆ. ಥಾಣೆಯ ಮಂಗಳ ಪ್ರೌಢಶಾಲೆ ಮತ್ತು ಜೂನಿಯರ್ ಕಾಲೇಜಿನಲ್ಲಿ ಅವರು ಶಿಕ್ಷಣ ಪಡೆದಿದ್ದಾರೆ.
ಬಡತನದ ಕಾರಣಕ್ಕೆ ಓದನ್ನು ಅರ್ಧಕ್ಕೆ ಬಿಟ್ಟಿದ್ದ ಶಿಂಧೆ ನಂತರ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದರು. 17ನೇ ವರ್ಷಕ್ಕೆ ಶಿವಸೇನೆ ಪಕ್ಷವನ್ನು ಸೇರಿದ್ದರು. ಎರಡು ಬಾರಿ ಥಾಣೆ ಮಹಾನಗರ ಪಾಲಿಕೆ ಕಾರ್ಪೊರೇಟರ್ ಆಗಿ ಕಾರ್ಯನಿರ್ವಹಿಸಿದ್ದ ಅವರು 2004 ರಲ್ಲಿ ಥಾಣೆ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಮರಾಠಾ ಸಮುದಾಯದ ಪ್ರಮುಖ ನಾಯಕರಾಗಿ ಬೆಳೆದಿದ್ದರು.
ಹಲವು ಹೋರಾಟಗಳ ಮೂಲಕ ಹಂತ ಹಂತವಾಗಿ ನಾಯಕನಾದ ಶಿಂಧೆ ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆಯವರ ನೆಚ್ಚಿನ ಶಿಷ್ಯರಾಗಿದ್ದರು. ಬಾಳಾ ಠಾಕ್ರೆ ಕುಟುಂಬದ ಅತ್ಯಂತ ನಂಬಿಕಸ್ಥ ನಾಯಕನಾಗಿದ್ದರು. ಲತಾ ಅವರನ್ನು ಮದುವೆಯಾಗಿದ್ದ ಶಿಂಧೆ ಅವರಿಗೆ ಮೂವರು ಮಕ್ಕಳಿದ್ದಾರೆ. ನದಿಯಲ್ಲಿ ಬೋಟಿಂಗ್ ಮಾಡುವಾಗ ಓರ್ವ ಪುತ್ರ ಮತ್ತು ಪುತ್ರಿ ಮೃತಪಟ್ಟಿದ್ದರು. ಮತ್ತೊಬ್ಬ ಪುತ್ರ ಡಾ. ಶ್ರೀಕಾಂತ್ ಅವರು ಕಲ್ಯಾಣ್ ಕ್ಷೇತ್ರದ ಶಿವಸೇನೆ ಸಂಸದರಾಗಿದ್ದಾರೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಂಡಾಯ ಸಾರಿದ ಏಕನಾಥ ಶಿಂಧೆ ಈಗ ಮಹಾರಾಷ್ಟ್ರದ 20ನೇ ಮುಖ್ಯಮಂತ್ರಿ ಆಗಿದ್ದಾರೆ.