alex Certify ಶಿವಸೇನೆಗೆ ಮತ್ತೊಂದು ಶಾಕ್: ಅನರ್ಹತೆ ನೋಟಿಸ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಂಡಾಯ ನಾಯಕ ಏಕನಾಥ್ ಶಿಂಧೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಸೇನೆಗೆ ಮತ್ತೊಂದು ಶಾಕ್: ಅನರ್ಹತೆ ನೋಟಿಸ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಂಡಾಯ ನಾಯಕ ಏಕನಾಥ್ ಶಿಂಧೆ

ಮುಂಬೈ: ಮಹಾರಾಷ್ಟ್ರದಲ್ಲಿ ಆಡಳಿತಾರೂಢ-ಎಂವಿಎ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ಮಹಾರಾಷ್ಟ್ರದ ಶಿವಸೇನೆ ಶಾಸಕ ಏಕನಾಥ್ ಶಿಂಧೆ, ಗುವಾಹಟಿಯಲ್ಲಿ ತನ್ನೊಂದಿಗೆ ಬೀಡುಬಿಟ್ಟಿರುವ 16 ಬಂಡಾಯ ನಾಯಕರ ವಿರುದ್ಧ ಉಪಸಭಾಪತಿ ನೀಡಿರುವ ಅನರ್ಹತೆ ನೋಟಿಸ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ.ಬಿ. ಪರ್ದಿವಾಲಾ ಅವರ ರಜಾಕಾಲದ ಪೀಠವು ಸೋಮವಾರ ಶಿಂಧೆ ಅವರ ಅರ್ಜಿಯನ್ನು ಆಲಿಸುವ ಸಾಧ್ಯತೆಯಿದೆ.

ಬಂಡಾಯ ಶಾಸಕರು ರಾಜ್ಯದಲ್ಲಿನ ಎಂವಿಎ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದು, ಅದನ್ನು ಉರುಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಎಂವಿಎ ಒಕ್ಕೂಟದಿಂದಾಗಿ ಶಿವಸೇನೆಯ ತತ್ವಗಳು ರಾಜಿಯಾಗುತ್ತಿವೆ ಎಂದು ಬಂಡಾಯ ನಾಯಕರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮತ್ತೊಂದು ಅರ್ಜಿಯಲ್ಲಿ ಹೇಳಿದ್ದಾರೆ. ಈ ಎರಡೂ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ.ಬಿ. ಪರ್ದಿವಾಲಾ ಅವರ ಪೀಠವು ಸೋಮವಾರ ವಿಚಾರಣೆ ನಡೆಸಲಿದೆ.

ಶಿಂಧೆ ನೇತೃತ್ವದ ಬಂಡಾಯ ಗುಂಪು ಕಾಂಗ್ರೆಸ್ ಮತ್ತು ಎನ್‌ಸಿಪಿಯನ್ನು ಒಳಗೊಂಡಿರುವ ಮಹಾ ವಿಕಾಸ್ ಅಘಾಡಿ ಮೈತ್ರಿಯಿಂದ ಶಿವಸೇನೆ ಹಿಂದೆ ಸರಿಯಬೇಕು ಎಂದು ಒತ್ತಾಯಿಸುತ್ತಿದೆ, ಆದರೆ ಶಿವಸೇನೆ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇದಕ್ಕೆ ನಿರಾಕರಿಸಿದ್ದಾರೆ.

ಬಂಡಾಯ ನಾಯಕರಿಗೆ ‘ಸಮನ್ಸ್’

ಮಹಾರಾಷ್ಟ್ರ ಶಾಸಕಾಂಗ ಕಾರ್ಯದರ್ಶಿ ಶಿಂಧೆ ಸೇರಿದಂತೆ 16 ಬಂಡಾಯ ಶಿವಸೇನೆ ಶಾಸಕರಿಗೆ ಶನಿವಾರ ‘ಸಮನ್ಸ್’ ಜಾರಿ ಮಾಡಿದ್ದು, ತಮ್ಮ ಅನರ್ಹತೆ ಕೋರಿ ಸಲ್ಲಿಸಿರುವ ದೂರುಗಳಿಗೆ ಜೂನ್ 27ರ ಸಂಜೆಯೊಳಗೆ ಲಿಖಿತ ಉತ್ತರ ನೀಡುವಂತೆ ಸೂಚಿಸಿದೆ.

ಮಹಾರಾಷ್ಟ್ರ ವಿಧಾನ ಭವನದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಭಾಗವತ್ ಅವರು ಸಹಿ ಮಾಡಿರುವ ಪತ್ರದಲ್ಲಿ ಶಿವಸೇನೆಯ ಮುಖ್ಯ ಸಚೇತಕ ಸುನೀಲ್ ಪ್ರಭು ಹೆಸರಿಸಿರುವ ಎಲ್ಲಾ 16 ಶಾಸಕರಿಗೆ ಸಮನ್ಸ್ ಕಳುಹಿಸಲಾಗಿದೆ.

ಶಿವಸೇನೆಯು ಶಿಂಧೆ ಸೇರಿದಂತೆ 16 ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಶಾಸಕಾಂಗ ಕಾರ್ಯದರ್ಶಿಗೆ ಮನವಿ ಸಲ್ಲಿಸಿದೆ.

ಅಲ್ಲದೇ 1986ರ ಮಹಾರಾಷ್ಟ್ರ ವಿಧಾನಸಭೆಯ ಸದಸ್ಯರ(ಪಕ್ಷಾಂತರದ ಆಧಾರದ ಮೇಲೆ ಅನರ್ಹತೆ) ನಿಯಮಗಳ ಅಡಿಯಲ್ಲಿ ಅವರನ್ನು ಅನರ್ಹಗೊಳಿಸುವಂತೆ ಸುನಿಲ್ ಪ್ರಭು ಅವರು ವಿಧಾನಸಭೆಯ ಉಪ ಸ್ಪೀಕರ್ ನರಹರಿ ಝಿರ್ವಾಲ್ ಅವರಿಗೆ ಪತ್ರವನ್ನು ಸಲ್ಲಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...