ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಆಯ್ಕೆಯ ಕಗ್ಗಂಟು ಕೊನೆಗೂ ಬಗೆಹರಿದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಆಯ್ಕೆ ಕುರಿತಾದ ಗೊಂದಲವನ್ನು ಪರಿಹರಿಸಿದ್ದಾರೆ.
ಅವರ ನೇತೃತ್ವದಲ್ಲಿ ನಡೆದ ಮಹಾರಾಷ್ಟ್ರ ಮಹಾಯುತಿ ನಾಯಕರ ಉನ್ನತ ಮಟ್ಟದ ಸಭೆಯಲ್ಲಿ ಗೊಂದಲ ಪರಿಹರಿಸಲಾಗಿದೆ. ಮುಖ್ಯಮಂತ್ರಿ ಸ್ಥಾನ ಬಿಜೆಪಿಗೆ ನೀಡಲು ಏಕನಾಥ ಶಿಂಧೆ, ಅಜಿತ್ ಪವಾರ್ ಒಪ್ಪಿಗೆ ಸೂಚಿಸಿದ್ದಾರೆ. ಇಂದು ಮುಂಬೈನಲ್ಲಿ ಸಿಎಂ ಆಯ್ಕೆಯ ಬಗ್ಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಾಗುವುದು. ಬಿಜೆಪಿ, ಮಹಾಯುತಿ ನಾಯಕರ ನಡುವೆ ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಸಭೆಯಲ್ಲಿ ಸಿಎಂ ಆಯ್ಕೆ, ಸಚಿವ ಸ್ಥಾನಗಳ ಹಂಚಿಕೆ ಕುರಿತಾಗಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಸಭೆಯ ಬಳಿಕ ಮಹಾರಾಷ್ಟ್ರ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಗುವುದು. ಡಿಸೆಂಬರ್ 2 ಅಥವಾ 5 ರಂದು ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ಏಕನಾಥ್ ಶಿಂಧೆ, ಅಜಿತ್ ಪವಾರ್ ಮಹಾರಾಷ್ಟ್ರ ಸಿಎಂ ಹುದ್ದೆಗೆ ದೇವೇಂದ್ರ ಫಡ್ನವಿಸ್ ಅವರ ಬೆಂಬಲಕ್ಕೆ ಹೆಸರು ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಆಯ್ಕೆಯ ಹಗ್ಗಜಗ್ಗಾಟದ ನಡುವೆಯೇ ಮಹಾಯುತಿಯ ಉನ್ನತ ನಾಯಕರು ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು.
ಈ ಬೆಳವಣಿಗೆಗಳ ಮಧ್ಯೆ, ಮಹಾರಾಷ್ಟ್ರದ ಮುಖ್ಯಮಂತ್ರಿ ಹುದ್ದೆಗೆ ದೇವೇಂದ್ರ ಫಡ್ನವಿಸ್ ಹೆಸರನ್ನು ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಇಬ್ಬರೂ ಒಪ್ಪುತ್ತಾರೆ ಮತ್ತು ಸಂಪೂರ್ಣವಾಗಿ ಬೆಂಬಲಿಸುತ್ತಾರೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಶಿಂಧೆ ಅವರಿಗೆ ಸೂಕ್ತ ಗೌರವ ನೀಡುವ ಭರವಸೆ ನೀಡಲಾಗಿದೆ. ಇನ್ನೆರಡು ದಿನಗಳಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ನಾಯಕನ ಆಯ್ಕೆಯಾಗುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ಅಜಿತ್ ಪವಾರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗುವುದು ಮತ್ತು ಅವರು ಹಣಕಾಸು ಖಾತೆಯನ್ನು ಸಹ ನಿರ್ವಹಿಸುವ ಸಾಧ್ಯತೆಯಿದೆ. ನಗರಾಭಿವೃದ್ಧಿ ಸಚಿವಾಲಯವನ್ನು ಶಿವಸೇನೆಗೆ ನೀಡಲಾಗುವುದು. ಗೃಹ, ಗ್ರಾಮೀಣಾಭಿವೃದ್ಧಿ ಮತ್ತು ಕಂದಾಯ ಖಾತೆಗಳನ್ನು ಬಿಜೆಪಿ ತನ್ನ ಬಳಿಯೇ ಉಳಿಸಿಕೊಳ್ಳಲಿದೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಪಿಡಬ್ಲ್ಯೂಡಿ ಇಲಾಖೆಯನ್ನು ನೀಡಲಾಗುವುದು. ಅಲ್ಲದೆ, ಸರ್ಕಾರದಲ್ಲಿ ಮರಾಠ ಮತ್ತು ಒಬಿಸಿ ಇಬ್ಬರಿಗೂ ಸೂಕ್ತ ಪ್ರಾತಿನಿಧ್ಯ ನೀಡಲಾಗುವುದು.
ಕೇಂದ್ರ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ ನಂತರ, ಮಹಾರಾಷ್ಟ್ರ ನಿಯೋಜಿತ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಭೇಟಿ ಉತ್ತಮ ಮತ್ತು ಧನಾತ್ಮಕ ಎಂದು ಬಣ್ಣಿಸಿದರು. ಮತ್ತೊಂದು ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನಿರ್ಧರಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
280 ಸದಸ್ಯ ಬಲದ ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಬಿಜೆಪಿ 132 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅದರ ಮಿತ್ರಪಕ್ಷಗಳಾದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ – ಕ್ರಮವಾಗಿ 57 ಮತ್ತು 41 ಸ್ಥಾನಗಳನ್ನು ಹೊಂದಿವೆ.