ಇದೇ ತಿಂಗಳು ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಮಹಾಘಟಬಂಧನ್ ಸಭೆಗೆ ಸೇರಲು ಎಂಟು ಹೊಸ ಪಕ್ಷಗಳು ಮುಂದೆ ಬಂದಿವೆ. ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (MDMK), ಕೊಂಗುನಾಡು ಮಕ್ಕಳ್ ದೇಶಿಯ ಕಚ್ಚಿ (KMDK), ವಿದುತಲೈ ಚಿರುತೈಗಲ್ ಕಚ್ಚಿ (VCK), ಕ್ರಾಂತಿಕಾರಿ ಸಮಾಜವಾದಿ ಪಕ್ಷ (RSP), ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ (AIFB), ಕೇರಳ ಕಾಂಗ್ರೆಸ್ (ಜೋಸೆಫ್), ಕೇರಳ ಕಾಂಗ್ರೆಸ್ (ಮಣಿ), ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಪಕ್ಷಗಳು ಬಿಜೆಪಿಯೇತರ ಮೈತ್ರಿಗೆ ತಮ್ಮ ಬೆಂಬಲವನ್ನು ನೀಡಿವೆ.
ವೈಕೋ ನೇತೃತ್ವದ ಎಂಡಿಎಂಕೆ ಮತ್ತು ಇಆರ್ ಈಶ್ವರನ್ ನೇತೃತ್ವದ ಕೆಎಂಡಿಕೆ 2014 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮಿತ್ರಪಕ್ಷಗಳಾಗಿದ್ದವು. ಜುಲೈ 17-18 ರಂದು ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ 2ನೇ ಸುತ್ತಿನ ಸಭೆ ನಡೆಯಲಿದೆ.
ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು ಒಗ್ಗಟ್ಟಿನಿಂದ ಎದುರಿಸಲು ಸಾಮಾನ್ಯ ಕಾರ್ಯತಂತ್ರವನ್ನು ರೂಪಿಸಲು ವಿರೋಧ ಪಕ್ಷಗಳ ನಾಯಕರು ಜೂನ್ 23 ರಂದು ಪಾಟ್ನಾದಲ್ಲಿ ಸಭೆ ನಡೆಸಿದ್ದರು.
ಈ ಸಭೆಯಲ್ಲಿ ಜನತಾ ದಳ (ಯುನೈಟೆಡ್), ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಿಪಿಎಂ, ಸಿಪಿಐ, ಸಿಪಿಐ-ಎಂಎಲ್, ಆರ್‌ಜೆಡಿ, ಜೆಡಿಯು, ಜೆಕೆಪಿಡಿಪಿ, ಜೆಕೆಎನ್‌ಸಿ, ಡಿಎಂಕೆ, ಎನ್‌ಸಿಪಿ, ಶಿವಸೇನೆ (ಯುಬಿಟಿ), ಎಸ್‌ಪಿ, ಎಎಪಿ ಮತ್ತು ಜೆಎಂಎಂ ಸೇರಿದಂತೆ ಒಟ್ಟು 15 ಪಕ್ಷಗಳು ಸಭೆಯಲ್ಲಿ ಭಾಗವಹಿಸಿದ್ದವು. ಇದೀಗ ಇನ್ನೂ ಎಂಟು ಪಕ್ಷಗಳು ವಿರೋಧ ಪಕ್ಷದ ಪಾಳಯಕ್ಕೆ ಬೆಂಬಲ ಸೂಚಿಸಿವೆ.
ಲೋಕಸಭೆಯಲ್ಲಿ ಈ 8 ಪಕ್ಷಗಳ ಬಲಾಬಲವೆಷ್ಟು ?
1. ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (MDMK): 0
2. ಕೊಂಗುನಾಡು ಮಕ್ಕಳ್ ದೇಶಿಯ ಕಚ್ಚಿ (ಕೆಡಿಎಂಕೆ): 0
3. ವಿದುತಲೈ ಚಿರುತೈಗಲ್ ಕಚ್ಚಿ (VCK): 1
4. ಕ್ರಾಂತಿಕಾರಿ ಸಮಾಜವಾದಿ ಪಕ್ಷ (RSP): 1
5. ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ (AIFB): 0
6. ಕೇರಳ ಕಾಂಗ್ರೆಸ್ (ಜೋಸೆಫ್): 0
7. ಕೇರಳ ಕಾಂಗ್ರೆಸ್ (ಮಣಿ): 1
8. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML): 3