ರಾಜ್ಯದ ಎಂಟು ಎಂಜಿನಿಯರಿಂಗ್ ಕಾಲೇಜುಗಳು ಸಂಜೆ ವೃತ್ತಿಪರರಿಗೆ ಸಂಜೆ ಕೋರ್ಸ್‌ಗಳನ್ನು ನೀಡಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿಂದ (ಎಐಸಿಟಿಇ) ಅನುಮತಿ ಪಡೆದಿವೆ.
ಎಂಟು ಕಾಲೇಜುಗಳಲ್ಲಿ ಐದು ಕಾಲೇಜುಗಳು ಬೆಂಗಳೂರಿನಲ್ಲಿ ಮತ್ತು ತಲಾ ಒಂದು ಗದಗ, ಮೈಸೂರು ಮತ್ತು ತುಮಕೂರಿನಲ್ಲಿವೆ.
ಎಐಸಿಟಿಇಯು ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಶನ್ (ಎನ್‌ಬಿಎ) ಯ ಮಾನ್ಯತೆಯನ್ನು ಕಡ್ಡಾಯಗೊಳಿಸಿರುವುದರಿಂದ, ಸರ್ಕಾರ ನಡೆಸುವ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ (ಯುವಿಸಿಇ) ಸೇರಿದಂತೆ ಹಲವಾರು ಕಾಲೇಜುಗಳು ಅನುಮತಿ ಪಡೆಯಲು ವಿಫಲವಾಗಿವೆ. ರಾಜ್ಯದಿಂದ ಸುಮಾರು 25 ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು.
ಆದಾಗ್ಯೂ AICTE ಕಾಲೇಜುಗಳಿಗೆ ಸಂಜೆ ಕೋರ್ಸ್‌ಗಳಿಗೆ ಅಕ್ಟೋಬರ್ 30 ರೊಳಗೆ ಪ್ರವೇಶವನ್ನು ಪೂರ್ಣಗೊಳಿಸಲು ಸೂಚಿಸಿದೆ. ಆದರೆ ಕಾಲೇಜುಗಳ ಅಧಿಕಾರಿಗಳು ಇದು ಕಡಿಮೆ ಅವಧಿಯಲ್ಲಿ ನೀಡಿರುವ ಸೂಚನೆ ಇನ್ನೂ ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಹೇಳುತ್ತಾರೆ.
“ಮುಂದಿನ ವಾರದಲ್ಲಿ ಕನಿಷ್ಠ ಎರಡು ಸರ್ಕಾರಿ ರಜೆಗಳು ಬರುವುದರಿಂದ ಮುಂದಿನ ಹತ್ತು ದಿನಗಳಲ್ಲಿ ಪ್ರವೇಶವನ್ನು ಪೂರ್ಣಗೊಳಿಸುವುದು ಕಷ್ಟ” ಎಂದು ಸಂಜೆ ಕೋರ್ಸ್ ನಡೆಸಲು ಅನುಮತಿ ಪಡೆದ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರೊಬ್ಬರು ಹೇಳಿದ್ದಾರೆ.
ಏತನ್ಮಧ್ಯೆ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಗಡುವನ್ನು ವಿಸ್ತರಿಸುವಂತೆ ಕೋರಿ ಎಐಸಿಟಿಇಗೆ ಪತ್ರ ಬರೆಯುವುದಾಗಿ ಕೆಲವು ಪ್ರಾಂಶುಪಾಲರು ತಿಳಿಸಿದ್ದಾರೆ.
ಮೈಸೂರಿನ ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಸದಾಶಿವೇಗೌಡ, ಕೆಲಸ ಮಾಡುವ ವೃತ್ತಿಪರರಿಗೆ ಮಾತ್ರ ಕೋರ್ಸ್‌ಗಳಿಗೆ ಸೇರಲು ಅವಕಾಶವಿದೆ ಮತ್ತು ಶೈಕ್ಷಣಿಕ ದಿನಗಳ ಕೊರತೆಯ ಸಂದರ್ಭದಲ್ಲಿ ವಾರಾಂತ್ಯದಲ್ಲಿ ತರಗತಿಗಳನ್ನು ನಡೆಸಬಹುದು. ಸಂಜೆ ಸಮಯ ಮತ್ತು ವಾರಾಂತ್ಯದಲ್ಲಿ ತರಗತಿಗಳನ್ನು ನಡೆಸಲಾಗುತ್ತೆ. ಕೆಲವು ವಿಷಯಗಳ ತರಗತಿಗಳನ್ನು ಆನ್‌ಲೈನ್‌ನಲ್ಲಿಯೂ ನಡೆಸಬಹುದು ಎಂದು ಅವರು ಹೇಳಿದರು.
ಆದರೆ ಎಐಸಿಟಿಇ ಸಂಜೆ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವವರು ಕಾಲೇಜಿನ 50 ಕಿಮೀ ವ್ಯಾಪ್ತಿಯೊಳಗೆ ವಾಸಿಸಬೇಕು ಎಂದು ಷರತ್ತು ವಿಧಿಸಿದೆ.
2019-20ರ ಶೈಕ್ಷಣಿಕ ವರ್ಷದಲ್ಲಿ ಗುಣಮಟ್ಟದ ಕಾರಣದಿಂದ AICTE ಸಂಜೆ ಎಂಜಿನಿಯರಿಂಗ್ ಪರಿಕಲ್ಪನೆಯನ್ನು ಹಿಂಪಡೆದಿತ್ತು. ಆದೇಶದ ನಂತರ ಸಂಜೆ ಕಾಲೇಜುಗಳಿಗೆ ಪ್ರವೇಶವನ್ನು ಸ್ಥಗಿತಗೊಳಿಸಲಾಯಿತು.ಆದಾಗ್ಯೂ ಬೇಡಿಕೆಯನ್ನು ಪರಿಗಣಿಸಿ ಕೌನ್ಸಿಲ್ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಸಂಜೆ ಕೋರ್ಸ್ ಪರಿಕಲ್ಪನೆಯನ್ನು ಮರು ಪರಿಚಯಿಸಲು ನಿರ್ಧರಿಸಿದೆ.