ಮಧ್ಯಪ್ರದೇಶದ ಮೊಟ್ಟೆ ಮಾರುವವನಿಗೆ ಕೋಟಿಗಟ್ಟಲೆ ಬಾಕಿ ತೆರಿಗೆ ನೋಟಿಸ್ ಬಂದಿದೆ. ದಮೋಹ್‌ನ ಪ್ರಿನ್ಸ್ ಸುಮನ್ ಅವರಿಗೆ ಸುಮಾರು 50 ಕೋಟಿ ರೂಪಾಯಿಗಳ ಆರ್ಥಿಕ ವಹಿವಾಟಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದಿದೆ. ನೋಟಿಸ್ ಪ್ರಕಾರ, ಅವರು ಸರ್ಕಾರಕ್ಕೆ 6 ಕೋಟಿ ರೂಪಾಯಿ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಪಾವತಿಸಬೇಕಾಗಿದೆ.
ಆದಾಯ ತೆರಿಗೆ ಇಲಾಖೆಯ ನೋಟಿಸ್ ಪ್ರಕಾರ, 2022 ರಲ್ಲಿ, “ಪ್ರಿನ್ಸ್ ಎಂಟರ್‌ಪ್ರೈಸಸ್” ಎಂಬ ವ್ಯವಹಾರವನ್ನು ದೆಹಲಿಯಲ್ಲಿ ಸುಮನ್ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಈ ಕಂಪನಿಯು ಕಳೆದ ಎರಡು ವರ್ಷಗಳಲ್ಲಿ ಚರ್ಮ, ಮರ ಮತ್ತು ಕಬ್ಬಿಣದಲ್ಲಿ ವ್ಯಾಪಾರ ಮಾಡುವಾಗ ಭಾರಿ ವಹಿವಾಟು ನಡೆಸಿದೆ ಎನ್ನಲಾಗಿದೆ.
ಮಾರ್ಚ್ 20 ರಂದು, ಆದಾಯ ತೆರಿಗೆ ಇಲಾಖೆಯು 49.24 ಕೋಟಿ ರೂಪಾಯಿಗಳ ಆರ್ಥಿಕ ವಹಿವಾಟಿನ ವಿವರವಾದ ವಿಶ್ಲೇಷಣೆಯನ್ನು ಕೇಳಿದೆ. ಇದರ ಜೊತೆಗೆ, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು, ಪಾವತಿ ವೋಚರ್‌ಗಳು, ಸಾರಿಗೆ ದಾಖಲೆಗಳು ಮತ್ತು ಬಿಲ್‌ಗಳಂತಹ 2022-2023 ರ ಆರ್ಥಿಕ ವರ್ಷದ ದಾಖಲೆಗಳನ್ನು ಸಹ ಅವರು ಪರಿಶೀಲಿಸಲು ಬಯಸಿದ್ದಾರೆ.
ಸುಮನ್ “ನಾನು ತಳ್ಳುಗಾಡಿಯಲ್ಲಿ ಮೊಟ್ಟೆಗಳನ್ನು ಮಾರುತ್ತೇನೆ. ನಾನು ದೆಹಲಿಗೆ ಹೋಗಿಯೇ ಇಲ್ಲ, ಅಲ್ಲಿ ಕಂಪನಿಯನ್ನು ಪ್ರಾರಂಭಿಸುವುದು ದೂರದ ಮಾತು” ಎಂದು ಹೇಳಿದ್ದಾರೆ.
ಜ್ಯೂಸ್ ಮಾರುವವನ ಪ್ರಕರಣ
ಪ್ರಿನ್ಸ್ ಸುಮನ್ ಪ್ರಕರಣದಂತೆ, ಉತ್ತರ ಪ್ರದೇಶದ ಅಲಿಗಢದ ಜ್ಯೂಸ್ ಮಾರುವವನಿಗೆ 7.79 ಕೋಟಿ ರೂಪಾಯಿಗಳ ಬಾಕಿ ತೆರಿಗೆ ಪಾವತಿಗೆ ನೋಟಿಸ್ ಬಂದಿದೆ.
ಸರೈ ರೆಹಮಾನ್ ನಿವಾಸಿ ರಹೀಸ್ ಅಹ್ಮದ್ (35) ಅವರಿಗೆ ಮಾರ್ಚ್ 18 ರಂದು ನೋಟಿಸ್ ಬಂದಿದೆ. ಅವರ ಹೆಸರಿನಲ್ಲಿ 2020-21 ರಲ್ಲಿ ಕೋಟಿಗಟ್ಟಲೆ “ನಕಲಿ” ವಹಿವಾಟುಗಳು ನಡೆದಿವೆ. ಆದ್ದರಿಂದ ಅವರು ಸರ್ಕಾರಕ್ಕೆ 7,79,02,457 ರೂಪಾಯಿ ಜಿಎಸ್‌ಟಿ ಪಾವತಿಸಬೇಕಾಗಿದೆ.
ರಹೀಸ್ ಅವರು, “ಈ ನೋಟಿಸ್ ಏಕೆ ನೀಡಲಾಗಿದೆ ಎಂದು ನನಗೆ ತಿಳಿದಿಲ್ಲ. ನಾನು ಜ್ಯೂಸ್ ಮಾತ್ರ ಮಾರುತ್ತೇನೆ. ನಾನು ಇಷ್ಟು ಹಣವನ್ನು ನೋಡಿಯೇ ಇಲ್ಲ. ಈಗ ನಾನು ಏನು ಮಾಡಬೇಕು ?” ಎಂದು ಹೇಳಿದ್ದಾರೆ.
ಅವರು ತಮ್ಮ ವೈಯಕ್ತಿಕ ದಾಖಲೆಗಳನ್ನು ಯಾರೊಂದಿಗಾದರೂ ಹಂಚಿಕೊಂಡಿದ್ದೀರಾ ಎಂದು ಆದಾಯ ತೆರಿಗೆ ಅಧಿಕಾರಿಗಳು ಕೇಳಿದಾಗ ಯಾರೊಂದಿಗೂ ಹಂಚಿಕೊಂಡಿಲ್ಲ ಎಂದು ತಿಳಿಸಿದ್ದಾರೆ.
ಗುರುತು ಕಳ್ಳತನದ ಶಂಕೆಯಿಂದ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಂತರ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಅಧಿಕೃತ ತನಿಖೆಗೆ ಆದೇಶಿಸಲಾಗಿದೆ.