ಬೆಂಗಳೂರು: ಒಂದರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುವ ಯೋಜನೆ ಯಶಸ್ವಿಯಾಗಿದ್ದು, 9 ಮತ್ತು 10ನೇ ತರಗತಿ ಮಕ್ಕಳಿಗೂ ಮೊಟ್ಟೆ ನೀಡುವ ಯೋಜನೆ ವಿಸ್ತರಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಇದಕ್ಕಾಗಿ ಆರ್ಥಿಕ ಇಲಾಖೆ ಅನುಮತಿ ಕೋರಲಾಗಿದೆ.
ಶಿಕ್ಷಣ ಇಲಾಖೆ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೂ ಮೊಟ್ಟೆ ನೀಡುವ ಯೋಜನೆ ವಿಸ್ತರಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಒಂದರಿಂದ 10ನೇ ತರಗತಿ ಮಕ್ಕಳಿಗೆ ವಾರಕ್ಕೆ ಎರಡು ಬಾರಿ ಮೊಟ್ಟೆ ನೀಡಲು 300 ಕೋಟಿ ರೂ. ಅವಶ್ಯಕತೆ ಇದ್ದು, ಮುಂದಿನ ವರ್ಷದಿಂದ 9 ಮತ್ತು 10ನೇ ತರಗತಿ ಮಕ್ಕಳಿಗೂ ಮೊಟ್ಟೆ ನೀಡಲಾಗುವುದು ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಸ್ತಾವನೆಗೆ ಮೌಖಿಕವಾಗಿ ಸಹಮತ ವ್ಯಕ್ತಪಡಿಸಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಅನುಮತಿ ಸಿಗಬೇಕಿದೆ. ಮೊಟ್ಟೆ ವಿತರಣೆ ಬಗ್ಗೆ ಮಕ್ಕಳ ಅಭಿಪ್ರಾಯ ಸಂಗ್ರಹಿಸಿದ್ದು, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 47.97 ಲಕ್ಷ ವಿದ್ಯಾರ್ಥಿಗಳಲ್ಲಿ 38.37 ಲಕ್ಷ ವಿದ್ಯಾರ್ಥಿಗಳು ಮೊಟ್ಟೆ ಬೇಕು ಎಂದು ಹೇಳಿದ್ದಾರೆ. 3.37 ಲಕ್ಷ ವಿದ್ಯಾರ್ಥಿಗಳು ಬಾಳೆಹಣ್ಣು, 2.27 ಲಕ್ಷ ವಿದ್ಯಾರ್ಥಿಗಳು ಚಿಕ್ಕಿ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ.
2021ರ ಡಿಸೆಂಬರ್ ನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳ ಮಕ್ಕಳಿಗೆ ಪೌಷ್ಟಿಕಾಂಶ ಒದಗಿಸಲು ಮೊಟ್ಟೆ ನೀಡುವ ಯೋಜನೆ ಆರಂಭಿಸಿದ್ದು, ನಂತರ ಉಳಿದ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ 9, 10 ನೇ ತರಗತಿ ಮಕ್ಕಳಿಗೂ ನೀಡಲಾಗುವುದು ಎನ್ನಲಾಗಿದೆ.