alex Certify ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ ಮಾಹಿತಿ

ಯಾದಗಿರಿ: ಇಡೀ ರಾಜ್ಯದಲ್ಲಿ ಯಾದಗಿರಿ ಜಿಲ್ಲೆ ಶಿಕ್ಷಣದಲ್ಲಿ ಮೊದಲ ಸ್ಥಾನ ಬರುತ್ತದೆ ಎಂದು ನಾನು ಭರವಸೆಯ ಗ್ಯಾರಂಟಿ ಕೊಡ್ತೇನೆ ಹಾಗೂ ಮಕ್ಕಳಿಗೆ ಊಟ ಕೊಟ್ಟರೆ ದೇವರಿಗೆ ನೈವೇದ್ಯ ಇಟ್ಟಂತೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ, ಅಕ್ಷರ ದಾಸೋಹ- ಮಧ್ಯಾಹ್ನ ಉಪಹಾರ ಯೋಜನೆಯಡಿ ಅಜೀಂ ಪ್ರೇಮ್ ಜೀ ಫೌಂಡೇಷನ್ ಇವರ ಸಹಭಾಗಿತ್ವದಲ್ಲಿ ಶಾಲಾ ಮಕ್ಕಳ ಪೌಷ್ಟಿಕತೆ ವೃದ್ಧಿಸಲು ಯಾದಗಿರಿ ತಾಲೂಕಿನ ಅರಿಕೇರಾ ಕೆ. ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ 2024– 25 ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಪೂರ್ವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ 6 ದಿನಗಳು ಪೂರಕ ಪೌಷ್ಟಿಕ ಆಹಾರವನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರದಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಕೊಡ್ತಾ ಬಂದಿದ್ದೇವೆ. ನಮ್ಮ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 76 ಸಾವಿರ ಶಾಲೆಗಳು ಬರುತ್ತವೆ. ಒಟ್ಟು 60 ಲಕ್ಷ ಮಕ್ಕಳು ವಿದ್ಯಾಭ್ಯಾಸ ಮಾಡ್ತಾ ಇದ್ದಾರೆ. ಇಂದು ವಾರದಲ್ಲಿ 6 ದಿನ ಮೊಟ್ಟೆ ವಿತರಿಸಲು ಚಾಲನೆ ನೀಡಲಾಗಿದ್ದು, ರಾಜ್ಯದ 57 ಲಕ್ಷ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯುತ್ತಿದ್ದಾರೆ. ಇದಕ್ಕೆ ಅಜೀಂ ಪ್ರೇಮ್ ಜಿ ಫೌಂಡೇಶನ್ ರವರು ಕೈ ಜೋಡಿಸಿದ್ದಾರೆ ಅವರಿಗೆ ಸರ್ಕಾರದ ಪರವಾಗಿ ಧನ್ಯವಾದಗಳು ತಿಳಿಸುತ್ತೇವೆ ಎಂದರು.

ಸರ್ಕಾರವು ಬಡವರ ಪರವಾಗಿ ಕಾರ್ಯಕ್ರಮಗಳನ್ನು ಕೊಡ್ತಾ ಇದೆ. ಸರ್ಕಾರ ಬಂದ ಮೇಲೆ ಗ್ಯಾರಂಟಿ ಕೊಡುತ್ತಿರುವುದು ನಮ್ಮ ಹೆಮ್ಮೆ. ಬಡವರ ಹೊಟ್ಟೆ ತುಂಬಿಸುವ ಕಾರ್ಯ ಅನ್ನಭಾಗ್ಯ ಯೋಜನೆಯಾಗಿದೆ. ಮಕ್ಕಳ ಪೌಷ್ಠಿಕತೆಗೆ ಹೆಚ್ಚು ಒತ್ತು ಕೊಡುತ್ತಿದ್ದು, ಈ ಯೋಜನೆಗೆ ಮೂರು ವರ್ಷಕ್ಕೆ 1591 ಕೋಟಿ ರೂಗಳನ್ನು ಖರ್ಚು ಮಾಡುತ್ತಿದ್ದು ಇತಿಹಾಸವಾಗಿದೆ. 5 ಸಾವಿರ ಶಿಕ್ಷಕರ ನೇಮಕವನ್ನು ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೊಡಲು ಪ್ರಯತ್ನಿಸಲಾಗುತ್ತಿದೆ ಎಂದು ಸಚಿವರು ನುಡಿದರು .

ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಮಾತನಾಡಿ; ನಾವೆಲ್ಲರೂ ಸೇರಿ ಸಚಿವರಿಗೆ ಧನ್ಯವಾದ ಹೇಳಬೇಕು. ಇವರ ಸತತ ಪ್ರಯತ್ನದ ಫಲವಾಗಿ ಹೆಚ್ಚುವರಿಯಾಗಿ 2 ದಿನದ ಬದಲಾಗಿ 6 ದಿನ ನೀಡಲು ಚಾಲನೆ ನೀಡಲು ನಮ್ಮ ಜಿಲ್ಲೆಗೆ ಬಂದು ಉದ್ಘಾಟನೆ ಮಾಡಿದ್ದು ಸಂತೋಷ ತಂದ ಸಂಗತಿಯಾಗಿದೆ ಎಂದರು.

ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ ಮಾತನಾಡಿ; ಶಾಲಾ ಮಕ್ಕಳ ಪೌಷ್ಟಿಕತೆ ಹೆಚ್ಚಿಸುವ ನಿಟ್ಟಿನಲ್ಲಿ ವಾರದಲ್ಲಿ 6 ದಿನ ಪೂರಕ ಪೌಷ್ಟಿಕ ಆಹಾರವನ್ನು ಒದಗಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಸರ್ಕಾರ ಮಾಡುತ್ತಿರುವುದು ಮಕ್ಕಳ ಸಲುವಾಗಿಯೇ ತಂದೆ ತಾಯಿ ಮಾಡದ ಕೆಲಸ ಸರ್ಕಾರ ಮಾಡುತ್ತಿದೆ. ಅಜಿಮ್ ಪ್ರೇಮ್ ಜಿ ಫೌಂಡೇಶನ್ ಸಂಸ್ಥೆಯವರು ಶೇಕಡಾ 80 ರಷ್ಟು ಅವರ ಅನುದಾನವನ್ನು ಸಮಾಜ ಸೇವೆಗೆ ಖರ್ಚು ಮಾಡುತ್ತಿದೆ ಇವರ ಕಾರ್ಯ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರ, ವಿಧಾನ ಪರಿಷತ್ ಶಾಸಕ ಶಶೀಲ್ ಜಿ ನಮೋಶಿ, ಅಜೀಂ ಪ್ರೇಮ್ ಜಿ ಫೌಂಡೇಶನ್ ಮುಖ್ಯಸ್ಥ ರುದ್ರೇಶ ಎಸ್, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಿತೇಶ ಕುಮಾರ ಸಿಂಗ್, ಶಿಕ್ಷಣ ಇಲಾಖೆ ಆಯುಕ್ತೆ ಬಿ.ಬಿ ಕಾವೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಪಿಎಂ ಪೋಷಣ್ ನಿರ್ದೇಶಕ ಸಿಂಧು ಬಿ ರೂಪೇಶ್, ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ ಎಸ್, ಜಿಲ್ಲಾ ಪಂಚಾಯತ ಸಿಇಓ ಲವೀಶ್ ಒರಡಿಯಾ, ಡಿಡಿಪಿಐ ಮಂಜುನಾಥ, ಅಕ್ಷರ ದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ಕನಕಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾರದಮ್ಮ, ಪ್ರೌಢ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಸಿದ್ದಲಿಂಗಯ್ಯ ಸ್ವಾಮಿ, ಪ್ರಾಥಮಿಕ ಶಾಲೆಯ ಅಧ್ಯಕ್ಷ ಸಿದ್ರಾಮ್ ಬೀರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...