ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಒಂದರಿಂದ ಎಂಟನೇ ತರಗತಿವರೆಗಿನ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ವಾರದಲ್ಲಿ ಎರಡು ದಿನ ಬೇಯಿಸಿದ ಕೋಳಿ ಮೊಟ್ಟೆ ವಿತರಿಸಲಾಗುವುದು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದ್ದು, ಸರ್ಕಾರ 84.52 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈ ಮೊದಲು ಕಲ್ಯಾಣ ಕರ್ನಾಟಕ ಭಾಗದ ಎಂಟು ಜಿಲ್ಲೆಗಳಲ್ಲಿ ಶಾಲೆಗಳಲ್ಲಿ ಜಾರಿಗೊಳಿಸಿದ್ದ ಮೊಟ್ಟೆ ನೀಡುವ ಯೋಜನೆಯನ್ನು ಉಳಿದ 23 ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ.
ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ನೀಡಲು ಸೂಚಿಸಲಾಗಿದೆ. ಮಕ್ಕಳಲ್ಲಿನ ಅಪೌಷ್ಟಿಕತೆ, ರಕ್ತ ಹೀನತೆ, ಪೋಷಕಾಂಶ ಕೊರತೆ ನಿವಾರಣೆಯ ಉದ್ದೇಶದಿಂದ ಪ್ರಧಾನಮಂತ್ರಿ ಪೋಷಣ್ ಯೋಜನೆಯಡಿ ಮೊಟ್ಟೆ, ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ನೀಡಲಾಗುವುದು.