ಬೆಂಗಳೂರು: ಸರ್ಕಾರಿ, ಅನುದಾನಿತ ಶಾಲೆಗಳ ಮಕ್ಕಳಿಗೆ ವಾರದಲ್ಲಿ ಆರು ದಿನ ಬೇಯಿಸಿದ ಮೊಟ್ಟೆ ಪೂರೈಕೆ ಮಾಡಲು ಅಜೀಂ ಪ್ರೇಮ್ ಜೀ ಫೌಂಡೇಶನ್ ಕೈಜೋಡಿಸಿದ್ದು, ಶಾಲಾ ಶಿಕ್ಷಣ ಇಲಾಖೆಗೆ ಸಹಕಾರ ನೀಡಲಿದೆ.
ಅಪೌಷ್ಟಿಕತೆ ನಿವಾರಣೆಗೆ ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ವಿತರಿಸಲಾಗುತ್ತಿದೆ. ಮೊಟ್ಟೆ ಸೇವಿಸದ ಮಕ್ಕಳಿಗೆ ಶೇಂಗಾ ಚಿಕ್ಕಿ, ಬಾಳೆಹಣ್ಣು ನೀಡಲಾಗುತ್ತಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಜಾ ದಿನ ಹೊರತುಪಡಿಸಿ ವಾರದ ಎಲ್ಲಾ ಶಾಲಾ ದಿನಗಳಲ್ಲಿ ಮೊಟ್ಟೆ ವಿತರಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಈ ಯೋಜನೆಗೆ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ ಜೀ ನೆರವು ನೀಡಲಿದ್ದಾರೆ.
ಅಜೀಂ ಪ್ರೇಮ್ ಜೀ ಫೌಂಡೇಶನ್ ಮೂಲಕ 1500 ಕೋಟಿ ರೂ. ದೇಣಿಗೆ ನೀಡುತ್ತಿದ್ದು, ವಾರದಲ್ಲಿ 4 ದಿನಗಳ ಮೊಟ್ಟೆ ವೆಚ್ಚವನ್ನು ಭರಿಸಲಿದೆ. 2 ದಿನಗಳ ವೆಚ್ಚವನ್ನು ಸರ್ಕಾರ ಭರಿಸಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 42.57 ಲಕ್ಷ ಮಕ್ಕಳಿಗೆ ಮೊಟ್ಟೆ ವಿತರಿಸಲಾಗುತ್ತಿದೆ. ಒಂದು ಮಟ್ಟಿಗೆ ಆರು ರೂಪಾಯಿ ದರ ನಿಗದಿ ಮಾಡಿದ್ದು, ಶಾಲಾ ಶಿಕ್ಷಣ ಇಲಾಖೆಯಿಂದ ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಶಾಲಾ ಅಭಿವೃದ್ಧಿ ಸಮಿತಿ ಜಂಟಿ ಖಾತೆಗೆ ಹಣ ಜಮಾ ಮಾಡಲಾಗುವುದು. ಅದರಲ್ಲಿ ಮೊಟ್ಟೆ ಬೇಯಿಸಲು ಇಂಧನ ವೆಚ್ಚ 30 ಪೈಸೆ, ಮೊಟ್ಟೆ ಸುಲಿದು ಕೊಡುವ ಬಿಸಿಯೂಟ ತಯಾರಕರಿಗೆ 30 ಪೈಸೆ, ಸಾಗಾಣೆ ವೆಚ್ಚ 20 ಪೈಸೆ ನೀಡಲಾಗುತ್ತಿದೆ.
ಜುಲೈ 20ರಂದು ಒಪ್ಪಂದ ಮಾಡಿಕೊಳ್ಳಲಿದ್ದು, ಆಗಸ್ಟ್ 1ರಿಂದ ಯೋಜನೆ ಜಾರಿಯಾಗುತ್ತಿದೆ. 8.12 ಲಕ್ಷ ಮಕ್ಕಳಿಗೆ ಚಿಕ್ಕಿ, ಬಾಳೆಹಣ್ಣು ವಿತರಿಸಲಾಗುವುದು. 1.27 ಲಕ್ಷ ಮಕ್ಕಳು ಯಾವುದೇ ಬೇಡಿಕೆ ಸಲ್ಲಿಸಿಲ್ಲ. ಮೂರು ವರ್ಷಗಳವರೆಗೆ ಒಪ್ಪಂದ ಜಾರಿಯಲ್ಲಿರುತ್ತದೆ.