ಬೆಂಗಳೂರು: ಕೋಳಿಮಾಂಸ, ಮೊಟ್ಟೆ ಸೇವಿಸುವವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಕೋಳಿ ಮಾಂಸ, ಮೊಟ್ಟೆ ಸೇವನೆಯಿಂದ ಪೌಷ್ಟಿಕಾಂಶ ಹೆಚ್ಚಳವಾಗಲಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕೋಳಿ ಉದ್ಯಮದ ಪಶುವೈದ್ಯರ ಸಂಸ್ಥೆ ಹಮ್ಮಿಕೊಂಡಿದ್ದ ಭಾರತದ ಎರಡು ಮತ್ತು ಮೂರನೇ ದರ್ಜೆಯ ನಗರದಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆ ವ್ಯಾಪಾರ ವರ್ಧನೆ ವಿಷಯ ಕುರಿತ ಸಂವಾದದಲ್ಲಿ ಮಾತನಾಡಿದ ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆಯ ಹೈದರಾಬಾದ್ ವಿಭಾಗದ ಮಾಜಿ ಉಪ ನಿರ್ದೇಶಕಿ ಡಾ. ವೀಣಾ ಶತ್ರುಘ್ನ ಅವರು, ಕೋಳಿ ಮಾಂಸ ಸೇವಿಸುವುದರಿಂದ ಪೌಷ್ಟಿಕಾಂಶ ಹೆಚ್ಚಳವಾಗುತ್ತದೆ ಎಂದು ತಿಳಿಸಿದ್ದಾರೆ.
ಮಹಾನಗರಗಳಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಾರೆ. ಎರಡು ಮತ್ತು ಮೂರನೇ ದರ್ಜೆಯ ನಗರದಲ್ಲಿ ಚಿಕನ್ ಮತ್ತು ಮೊಟ್ಟೆ ಸೇವನೆ ಪ್ರಮಾಣ ಕಡಿಮೆ ಇರುವ ಕಾರಣದಿಂದ ಬಹುತೇಕ ಜನರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪೋಷಕಾಂಶ ಪ್ರಮಾಣ ಕಡಿಮೆ ಇರುವ ಆಹಾರ ಸೇವಿಸುವುದರಿಂದ ಮಕ್ಕಳಲ್ಲಿ ಬೆಳವಣಿಗೆ ಕುಂಠಿತವಾಗುತ್ತದೆ. ಪೌಷ್ಟಿಕಾಂಶ ಆಹಾರ ಸೇವಿಸುವುದರಿಂದ ಪೋಷಕರು ಕುಳ್ಳಗಿದ್ದರೂ ಕೂಡ ಮಕ್ಕಳು ಎತ್ತರವಾಗಿ ಬೆಳೆಯಲು ಸಾಧ್ಯ. ಕೊಬ್ಬಿನಾಂಶದ ಆಹಾರ ಸೇವನೆಯಿಂದ ಮಕ್ಕಳು ದಪ್ಪಗಾಗುತ್ತಾರೆ. ಅಂತಹ ಆಹಾರ ಸೇವಿಸುವ ಬದಲು ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಸೇವಿಸುವುದರಿಂದ ಪೋಷಕಾಂಶ ಹೇರಳವಾಗಿರುವ ಆಹಾರ ಸೇವಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.