
ಮಂಗಳೂರು: ಅನೇಕ ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಬೆನ್ನಲ್ಲೇ ರಾಜ್ಯದಲ್ಲಿ ಕಾಗೆಗಳು ಮೃತಪಟ್ಟಿರುವುದು ಕರಾವಳಿ ಭಾಗದ ಜನರಲ್ಲಿ ಆತಂಕ ಹೆಚ್ಚಿಸಿದೆ.
ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ಕಾಗೆಗಳು ಮೃತಪಟ್ಟಿರುವುದು ಆತಂಕವನ್ನು ಹೆಚ್ಚಿಸಿದೆ. ಮಂಗಳೂರು ಹೊರವಲಯದ ಮಂಜನಾಡಿ ಆರಂಗಡಿ ಸಮೀಪದ ಬೆಟ್ಟದಲ್ಲಿ ಆರು ಕಾಗೆಗಳು ಮೃತಪಟ್ಟಿವೆ. ಅವು ಹಕ್ಕಿಜ್ವರದಿಂದ ಮೃತಪಟ್ಟಿರಬಹುದೆಂದು ಹೇಳಲಾಗಿದೆ.
ಮಧ್ಯಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ, ಕೇರಳ ಮೊದಲಾದ ಕಡೆಗಳಲ್ಲಿ ಹಕ್ಕಿಜ್ವರದಿಂದ ಕಾಗೆ ಹಾಗೂ ಅನೇಕ ಪಕ್ಷಿಗಳು ಮೃತಪಟ್ಟಿದ್ದು, ಹೈಅಲರ್ಟ್ ಘೋಷಿಸಿ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಮಂಗಳೂರು ಹೊರವಲಯದಲ್ಲಿಯೂ ಕಾಗೆಗಳು ಸಾವನ್ನಪ್ಪಿರುವುದು ಹಕ್ಕಿಜ್ವರದ ಆತಂಕ ಮೂಡಿಸಿದೆ. ಕೇರಳದಲ್ಲಿ ಒಂದೇ ದಿನ 1700 ಬಾತುಕೋಳಿಗಳು ಸಾವನ್ನಪ್ಪಿವೆ. ಕೊಟ್ಟಾಯಂನಲ್ಲಿ ಸುಮಾರು 40 ಸಾವಿರ ಕೋಳಿಗಳನ್ನು ಕೊಲ್ಲಲು ತೀರ್ಮಾನಿಸಲಾಗಿದೆ. ಮೊಟ್ಟೆ, ಕೋಳಿ ಮಾಂಸ ಸೇವನೆ, ಮಾರಾಟ ನಿಷೇಧ ಮಾಡಲಾಗಿದೆ ಎನ್ನುವ ಗಾಳಿಸುದ್ದಿಗಳು ಹರಿದಾಡುತ್ತಿವೆ ಎಂದು ಹೇಳಲಾಗಿದೆ.