ಬ್ಯಾಂಕುಗಳಿಂದ ಸಾಲ ಪಡೆಯಲು ಸಾಧ್ಯವಾಗದ ಕಡಿಮೆ ಆದಾಯದ ಶ್ರೀಸಾಮಾನ್ಯರಿಗೆ ಸಾಲ ನೀಡುವ ಮೂಲಕ ಹೆಸರುವಾಸಿಯಾಗಿರುವ ಶ್ರೀರಾಮ್ ಗ್ರೂಪ್ ಸಂಸ್ಥೆಯ ಸಂಸ್ಥಾಪಕ ಆರ್. ತ್ಯಾಗರಾಜನ್, ಬರೋಬ್ಬರಿ 6,210 ಕೋಟಿ ರೂಪಾಯಿಗಳನ್ನು ತಮ್ಮ ಕಂಪನಿಯ ಉದ್ಯೋಗಿಗಳಿಗೆ ದಾನ ನೀಡುವ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.
ತಮಿಳುನಾಡಿನ ಶ್ರೀಮಂತ ಕುಟುಂಬದಲ್ಲಿ ಜನಿಸಿದ ತ್ಯಾಗರಾಜನ್ ಗಣಿತಶಾಸ್ತ್ರದಲ್ಲಿ ಪದವಿ ಪಡೆದಿದ್ದು, ವಿದ್ಯಾಭ್ಯಾಸದ ನಂತರ ಹಲವು ಕಂಪನಿಗಳಲ್ಲಿ ಕೆಲಸ ಮಾಡಿ ಬಳಿಕ 1974ರಲ್ಲಿ ಚೆನ್ನೈನಲ್ಲಿ ಶ್ರೀರಾಮ್ ಗ್ರೂಪ್ ಸ್ಥಾಪಿಸಿದ್ದರು. ಪ್ರಸ್ತುತ ಇವರ ಕಂಪನಿಯಲ್ಲಿ 1,08,000 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಸಾವಿರಾರು ಕೋಟಿ ರೂಪಾಯಿಗಳ ಆಸ್ತಿ ಹೊಂದಿದ್ದರೂ ಸಹ ತ್ಯಾಗರಾಜನ್ ಸರಳ ಜೀವನ ನಡೆಸುತ್ತಿದ್ದಾರೆ.
ಈಗಲೂ ಅವರು ಕೇವಲ ಆರು ಲಕ್ಷ ರೂಪಾಯಿ ಬೆಲೆ ಬಾಳುವ ಕಾರು ಹೊಂದಿದ್ದು, ಮೊಬೈಲ್ ಕೂಡ ಬಳಸುವುದಿಲ್ಲ. 86 ವರ್ಷದ ತ್ಯಾಗರಾಜನ್ ಇದೀಗ 750 ದಶಲಕ್ಷ ಡಾಲರ್ (6,210) ಅಧಿಕ ಹಣವನ್ನು ತಮ್ಮ ಕಂಪನಿಯ ಉದ್ಯೋಗಿಗಳಿಗೆ ದಾನವಾಗಿ ನೀಡಲು ಮುಂದಾಗಿದ್ದಾರೆ. ಈ ವಿಚಾರವನ್ನು ಅವರು ʼಬ್ಲೂಮ್ ಬರ್ಗ್ʼ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.