ಮಂಗಳೂರು: ಮಂಗಳೂರಿನಲ್ಲಿರುವ ದೇಶದ ಮೊದಲ ಮೀನುಗಾರಿಕೆ ಕಾಲೇಜನ್ನು ವಿಶ್ವ ವಿದ್ಯಾಲಯವಾಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗಿದೆ ಎಂದು ಮೀನುಗಾರಿಕೆ, ಒಳನಾಡು ಸಾರಿಗೆ ಮತ್ತು ಬಂದರು ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.
ಮಂಗಳೂರಿನ ಎಕ್ಕೂರಿನ ಮೀನುಗಾರಿಕೆ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ, ಬಿಗ್ ಫಿಶ್ 2.0 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರಿನ ಮೀನುಗಾರಿಕೆ ಕಾಲೇಜು ವಿಶ್ವವಿದ್ಯಾಲಯವಾಗುವಂತಹ ಅರ್ಹತೆಗಳನ್ನು ಹೊಂದಿದೆ. ಬೇರೆ ರಾಜ್ಯಗಳಿಗೆ ಈ ಕಾಲೇಜು ಮಾದರಿಯಾಗಿದೆ. 65 ಎಕರೆಯಷ್ಟು ವಿಶಾಲ ಜಾಗ ಹೊಂದಿರುವ ಮಂಗಳೂರಿನ ಮೀನುಗಾರಿಕೆ ಕಾಲೇಜಿನಲ್ಲಿ ಓದಿದವರು ತಮ್ಮ ರಾಜ್ಯಗಳಿಗೆ ತೆರಳಿ ಹೊಸ ಕಾಲೇಜು, ವಿವಿಗಳನ್ನು ರಚಿಸಲು ಸಾಧ್ಯವಾಗಿದೆ. ಆದರೆ, ನಮ್ಮ ರಾಜ್ಯದಲ್ಲಿ ಈ ಪ್ರಯತ್ನದಲ್ಲಿ ನಾವು ಹಿಂದೆ ಇದ್ದೇವೆ ಎಂದು ತಿಳಿಸಿದ್ದಾರೆ.