ಬೆಂಗಳೂರು : ‘ನಮ್ಮ ಮೆಟ್ರೋ’ ಟಿಕೆಟ್ ದರ ಏರಿಕೆಯಾದ ಹಿನ್ನೆಲೆ ಬೆಂಗಳೂರಿನಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಹೌದು, ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳವಾದ ಹಿನ್ನೆಲೆ ಪ್ರಯಾಣಿಕರು ನಮ್ಮ ಮೆಟ್ರೋಗೆ ಸೆಡ್ಡು ಹೊಡೆದು ಆಟೋ, ಕ್ಯಾಬ್ ನತ್ತ ಮುಖ ಮಾಡಿದ್ದಾರೆ.
ಟಿಕೆಟ್ ದರ ಏರಿಕೆಯಿಂದಾಗಿ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಜನರ ಸಂಖ್ಯೆ ಕುಂಠಿತವಾಗುತ್ತಿದ್ದಂತೆ ಸಹಜವಾಗಿಯೇ ಕಲೆಕ್ಷನ್ ಸಹ ಕಡಿಮೆಯಾಗಿದೆ.ಪ್ರತಿದಿನ ಮೆಟ್ರೋದಲ್ಲಿ 8 ರಿಂದ 9 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು ಆದರೆ ದರ ಏರಿಕೆಯಾದ ಮೇಲೆ ಪ್ರತಿದಿನ 6 ರಿಂದ 7 ಲಕ್ಷ ಪ್ರಯಾಣಿಕರು ಮಾತ್ರ ಸಂಚಾರ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೆಟ್ರೋ ಬಿಟ್ಟು ತಮ್ಮ ಸ್ವಂತ ಕಾರು ಬೈಕ್ ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿ ಕಳೆದ ನಾಲ್ಕು ದಿನದಿಂದ ನಗರದಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆ ಉಂಟಾಗಿದೆ.
ಮೆಟ್ರೋ ಟಿಕೆಟ್ ದರ ಏರಿಕೆಗೆ ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲೇ ಬಿಎಂಆರ್ ಸಿಲ್ ಟಿಕೆಟ್ ಬೆಲೆ ಕೊಂಚ ಇಳಿಕೆ ಮಾಡಿದೆ.ಮೆಟ್ರೋ ಟಿಕೆಟ್ ನ ಕನಿಷ್ಟ ಹಾಗೂ ಗರಿಷ್ಟ ದರ ಹಾಗೆಯೇ ಇರಲಿದೆ. ಆದರೆ ಕೆಲವು ಸ್ಟೇಷನ್ ಗಳಿಗೆ ಇರುವ ಟಿಕೆಟ್ ಬೆಲೆಯಲ್ಲಿ 10 ರೂ ಇಳಿಸಲಾಗಿದೆ.ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ, ಕನಿಷ್ಟ ಬೆಲೆ 10 ರೂ ಹಾಗೂ ಗರಿಷ್ಠ ಬೆಲೆ 90 ರೂ ಹಾಗೆಯೇ ಇರಲಿದೆ. ಆದರೆ ಕೆಲವು ದೂರಗಳಿಗೆ ಏರಿಸಿದ್ದ ಬೆಲೆಯಲ್ಲಿ ಗರಿಷ್ಟ 10 ರೂ ಇಳಿಸಲಾಗಿದೆ.