ಇಂಡೋನೇಷ್ಯಾ: ಇಂಡೋನೇಷ್ಯಾದಲ್ಲಿ ವಿವಾಹಪೂರ್ವ ಲೈಂಗಿಕತೆ ನಿಷೇಧಿಸುವ ಕುರಿತಾದ ಶಾಸನವು ವಿಶ್ವಾದ್ಯಂತ ಕಳವಳವನ್ನು ಉಂಟುಮಾಡಿದೆ. ಪ್ರವಾಸೋದ್ಯಮಕ್ಕಾಗಿ ದೇಶಕ್ಕೆ ಆಗಾಗ್ಗೆ ಬರುವ ತಮ್ಮ ನಾಗರಿಕರ ಸುರಕ್ಷತೆ ಬಗ್ಗೆ ಅನೇಕ ಸರ್ಕಾರಗಳು ಚಿಂತಿಸುತ್ತಿವೆ.
ಮೂರು ವರ್ಷಗಳ ಹಿಂದೆಯೇ ಸಿದ್ಧವಾಗಿದ್ದ ಕಾನೂನನ್ನು ಜಾರಿ ಮಾಡಲು ಇಂಡೋನೇಷ್ಯಾ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ವಿವಾಹಪೂರ್ವ ಲೈಂಗಿಕತೆ ನಿಷೇಧಿಸುವ ಕರಡು ಅಪರಾಧ ಸಂಹಿತೆ ಸಿದ್ಧಪಡಿಸಿರುವ ಸರ್ಕಾರ, ಮುಂಬರುವ ಸಂಸತ್ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಸಜ್ಜಾಗಿದೆ.
ಹೊಸ ನಿಯಮದ ಪ್ರಕಾರ ವಿವಾಹಪೂರ್ವ ಲೈಂಗಿಕ ಸಂಬಂಧ ಹೊಂದಿದವರಿಗೆ ಗರಿಷ್ಠ ಒಂದು ವರ್ಷ ಜೈಲು ಶಿಕ್ಷೆ ಅಥವಾ ದಂಡ ವಿಧಿಸುವ ನಿಯಮ ರೂಪಿಸಲಾಗಿದೆ. ಮದುವೆಯಾದ ಬಳಿಕವೂ ವಿವಾಹೇತರ ಸಂಬಂಧ ಹೊಂದಿದ್ದರೆ ಗಂಡ ಅಥವಾ ಹೆಂಡತಿ ವ್ಯಭಿಚಾರದ ಆರೋಪದ ಮೇಲೆ ದೂರು ದಾಖಲಿಸಬಹುದಾಗಿದೆ. ಅವಿವಾಹಿತರಾಗಿದ್ದರೆ ಪೋಷಕರು ದೂರು ನೀಡಬಹುದಾಗಿದೆ.
ಇಂಡೋನೇಷ್ಯಾದ ಅಧಿಕಾರಿಗಳು, ಈ ಕಾನೂನು ದೇಶಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಒತ್ತಿ ಹೇಳಿದ್ದಾರೆ. ಮಾಧ್ಯಮಗಳಲ್ಲಿ ಸೋರಿಕೆಯಾದ ಕರಡುಗಳು ವಿವಾಹೇತರ ಲೈಂಗಿಕತೆಯಲ್ಲಿ ತೊಡಗಿರುವವರನ್ನು ತಕ್ಷಣದ ಸಂಬಂಧಿಕರು ವರದಿ ಮಾಡಿದರೆ ಮಾತ್ರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸೂಚಿಸುತ್ತದೆ ಎಂದೂ ಹೇಳಿದ್ದಾರೆ.
ಇಂಡೋನೇಷ್ಯಾದ ಬಾಲಿಗೆ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಪೈಕಿ ವಿವಾಹವಾಗದ ಜೋಡಿಗಳೂ ಇರುತ್ತವೆ. ಹೀಗಾಗಿ ಈ ಕಾನೂನು ಜಾರಿಗೆ ಬಂದ ನಂತರ ಅವರನ್ನು ಬಂಧಿಸಿ ಶಿಕ್ಷಿಸಲಾಗುತ್ತಾ ಎಂಬ ಪ್ರಶ್ನೆ ಈಗ ಮೂಡಿದೆ.