ದಾವಣಗೆರೆ: ಕರ್ನಾಟಕ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ವತಿಯಿಂದ ಅರಿವು ಶೈಕ್ಷಣಿಕ ಸಾಲ ಯೋಜನೆ ನವೀಕರಣ, ಸ್ವಯಂ ಉದ್ಯೋಗ ಸಾಲ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಬ್ಯಾಂಕ್ ಸಹಯೋಗದೊಂದಿಗೆ ಸಾಲ ಮತ್ತು ಸಹಾಯಧನ ಯೋಜನೆ, ಸ್ವ ಸಹಾಯ ಗುಂಪುಗಳ ಮೂಲಕ ಸಾಲ ಮತ್ತು ಸಹಾಯಧನ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರಿವು ಶೈಕ್ಷಣಿಕ ಸಾಲ ಯೋಜನೆ ನವೀಕರಣ ಯೋಜನೆಯಡಿ ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳು ಈಗಾಗಲೇ ಕಳೆದ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ(ನವೀಕರಣ) ಯೋಜನೆಯಡಿಯಲ್ಲಿ ಸೌಲಭ್ಯ ಪಡೆದು 2021-22ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ, 2ನೇ ಕಂತಿಗೆ ‘ಸುವಿಧಾ ತಂತ್ರಾಂಶ’ ದಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯೊಂದಿಗೆ https://suvidha.karnataka.gov.in ಜಾಲತಾಣದಲ್ಲಿ ಅರ್ಜಿ ಸಲ್ಲಿಸಬಹುದು.
ನಿಗಮದ ಯೋಜನೆಗಳನ್ನು ಪಡೆದುಕೊಳ್ಳಲು ಇಚ್ಚಿಸುವವರು ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಕ್ಕೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 98,000 ರೂ. ಗಳು ಪಟ್ಟಣ ಪ್ರದೇಶದವರಿಗೆ 1,20,000 ರೂ. ಗಳ ಒಳಗಿರಬೇಕು. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು. ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು ಹಾಗೂ ಚಾಲ್ತಿಯಲ್ಲಿರುವ ಜಾತಿ ಆದಾಯ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅರ್ಜಿ ನಮೂನೆಗಳನ್ನು ನಿಗಮದ ವೆಬ್ಸೈಟ್ನಲ್ಲಿ ಹಾಗೂ ಉಚಿತವಾಗಿ ಜಿಲ್ಲಾ ಕಚೇರಿಯಲ್ಲಿ ಪಡೆಯಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಅರ್ಜಿದಾರರು ನಿಗಮದ ಜಿಲ್ಲಾ ಕಚೇರಿ ಹಾಗೂ ನಿಗಮದ ವೆಬ್ಸೈಟ್ https://kaad.karnataka.gov.in ಅಥವಾ ಕಚೇರಿ ದೂರವಾಣಿ ಸಂಖ್ಯೆ: 08192-230934 ಕ್ಕೆ ಸಂಪರ್ಕಿಸಬಹುದು. ಅರ್ಜಿಯನ್ನು ಡಿ.1 ರಿಂದ ಪಡೆದುಮ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ 2022 ರ ಜ.10 ರೊಳಗಾಗಿ ಸಲ್ಲಿಸಬೇಕು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.