ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಬಾಲಕಿಯೊಬ್ಬಳು ಶುಲ್ಕ ಪಾವತಿಸದ ಕಾರಣ ಪರೀಕ್ಷೆಗೆ ಕುಳಿತುಕೊಳ್ಳದಂತೆ ಹೇಳಿದ್ದಕ್ಕೆ ಅಳುತ್ತಿರುವ ವೀಡಿಯೊವನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಮಂಗಳವಾರ ಹಂಚಿಕೊಂಡಿದ್ದಾರೆ.
ಪಿಲಿಭಿತ್ ನ ಬಿಜೆಪಿ ಸಂಸದರಾದ ವರುಣ್ ಗಾಂಧಿ ಟ್ವಿಟರ್ ನಲ್ಲಿ ಈ ಮಗಳ ಕಣ್ಣೀರು ಶುಲ್ಕ ಪಾವತಿಸದೆ ಅವಮಾನವನ್ನು ಎದುರಿಸುತ್ತಿರುವ ಲಕ್ಷಾಂತರ ಮಕ್ಕಳ ನೋವನ್ನು ತೋರಿಸುತ್ತದೆ. ಮಕ್ಕಳ ಶಿಕ್ಷಣಕ್ಕೆ ಹಣಕಾಸಿನ ಅಡಚಣೆಯಾಗದಂತೆ ನೋಡಿಕೊಳ್ಳುವುದು ಪ್ರತಿ ಜಿಲ್ಲೆಯ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳ ನೈತಿಕ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ಖಾಸಗಿ ಸಂಸ್ಥೆಗಳಿಗೂ ಅವರು ಸಂದೇಶ ನೀಡಿದ್ದು, “ಮಾನವೀಯತೆಯನ್ನು ಮರೆಯಬೇಡಿ. ಶಿಕ್ಷಣ ವ್ಯಾಪಾರವಲ್ಲ.” ಎಂದು ಹೇಳಿದ್ದಾರೆ.
ಉನ್ನಾವೋದ ಬಂಗಾರ್ ಮೌ ಗೆ ಸಮೀಪವಿರುವ ದೂರದ ಹಳ್ಳಿಯಾದ ಟೋಲಾದಲ್ಲಿ ಶಾಲೆಯ ಗೇಟ್‌ಗಳ ಹೊರಗೆ ಸೋಮವಾರದ ಮಧ್ಯವಾರ್ಷಿಕ ಪರೀಕ್ಷೆಯನ್ನು ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳು ದುಃಖಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.
ಆರನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಅಪೂರ್ವ ಸಿಂಗ್, “ಅಪ್ಪ ಇಂದು ಶುಲ್ಕದೊಂದಿಗೆ ಬರುತ್ತಾರೆ ಎಂದು ನಾನು ಹೇಳಿದೆ, ಆದರೆ ಶಾಲಾ ಆಡಳಿತ ಮಂಡಳಿಯವರು ನಮ್ಮನ್ನು ಬಲವಂತವಾಗಿ ಹೊರಹಾಕಿದರು ಎಂದು ಕಣ್ಣೀರಿಟ್ಟಿದ್ದಾಳೆ.
ಸಾರ್ವಜನಿಕ ಪ್ರತಿಭಟನೆಯ ನಂತರ, ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ನೀಡಲಾಗುವುದು ಎಂದು ಶಾಲೆಯ ಆಡಳಿತ ತಿಳಿಸಿದೆ.