ಬೆಂಗಳೂರು : 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಪಿ ಎಂ ಪೋಷಣ್ ಮಧ್ಯಾಹ್ನ ಉಪಾಹಾರ ಯೋಜನೆಯ ಅನುಷ್ಠಾನದ ವ್ಯಾಪ್ತಿಯಲ್ಲಿ ಅಡುಗೆ ಕೇಂದ್ರಗಳಿರುವ SSLC ಪರೀಕ್ಷಾ ಕೇಂದ್ರಗಳಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ ವಿತರಿಸುವ ಬಗ್ಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಆದೇಶದಲ್ಲಿರುವಂತೆ SSLC ಪಬ್ಲಿಕ್ ಪರೀಕ್ಷೆಗಳು ದಿನಾಂಕ : 25.03.2024 ರಿಂದ ಪ್ರಾರಂಭಗೊಂಡು ದಿನಾಂಕ: 06.04.2024ರವರೆಗೆ ನಡೆಯಲಿದ್ದು ಈ ದಿನಾಂಕಗಳಂದು SSLC ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಕಾರ್ಯಕ್ಕೆ ಯಾವುದೇ ಅಡಚಣೆಯಾಗದಂತೆ SSLC ವಾರ್ಷಿಕ ಪಬ್ಲಿಕ್ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟವನ್ನು ಸಿದ್ಧಪಡಿಸಿ ವಿತರಿಸುವಂತೆ ಆದೇಶಿಸಿದೆ.
ಅಡುಗೆ ಕೇಂದ್ರಗಳಿರುವ SSLC ಪರೀಕ್ಷಾ ಕೇಂದ್ರಗಳಲ್ಲಿ 1167-ಸರ್ಕಾರಿ ಮತ್ತು 884- ಅನುದಾನಿತ ಶಾಲೆಗಳ ಮಧ್ಯಾಹ್ನ ಬಿಸಿಯೂಟ ಸ್ವೀಕರಿಸಲು ಅಪೇಕ್ಷಿಸಿರುವ ಹಾಗೂ ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ಅವರ ಹಾಜರಾತಿ ಸಂಖ್ಯೆಗೆ ಅನುಗುಣವಾಗಿ ಬಿಸಿಯೂಟ ಸಿದ್ಧಪಡಿಸಿ ವಿತರಿಸುವಂತೆ ಸೂಚಿಸಿದೆ.
ಪರೀಕ್ಷಾ ಕೇಂದ್ರಗಳಿರುವ ಶಾಲೆಗಳ ಅಡುಗೆ ಕೇಂದ್ರಗಳಲ್ಲಿ ಅಡುಗೆ ತಯಾರಿಕೆ ಮತ್ತು ಬಡಿಸುವ ನಿರ್ವಹಣೆಗೆ ಅಡುಗೆ ಸಿಬ್ಬಂದಿಯನ್ನು ಹಾಗೂ ಮೇಲ್ವಿಚಾರಕರಾಗಿ ವಿಷಯ ಬೋಧಕರಲ್ಲದ ಶಿಕ್ಷಕರಾದ ದೈಹಿಕ ಶಿಕ್ಷಣ ಶಿಕ್ಷಕರು, ವೃತ್ತಿ ಶಿಕ್ಷಕರು ಇದ್ದಲ್ಲಿ ಒಬ್ಬರನ್ನು ನಿಯೋಜಿಸಿ ಯಾವುದೇ ಆರೋಪಗಳಿಗೆ ಅವಕಾಶ ನೀಡದಂತೆ ವಿರ್ವಹಿಸಲು ಸೂಚಿಸಿದೆ.