ಬೆಂಗಳೂರು: ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ನಿರ್ದಿಷ್ಟ ಕಾರ್ಯಭಾರವಿಲ್ಲದ ಕಾರಣ 44 ಸಹಾಯಕ ಪ್ರಾಧ್ಯಾಪಕರನ್ನು ಕಾರ್ಯಭಾರ ಇರುವ ಬೇರೆ ಕಾಲೇಜುಗಳಿಗೆ ವರ್ಗಾವಣೆ ಮಾಡಿ ಕಾಲೇಜು ಶಿಕ್ಷಣ ಇಲಾಖೆ ಆದೇಶಿಸಿದೆ.
ವರ್ಗಾವಣೆಗೊಂಡ ಸಹಾಯಕ ಪ್ರಾಧ್ಯಾಪಕರಲ್ಲಿ ಹೆಚ್ಚಿನವರು ವಾಣಿಜ್ಯ, ಬ್ಯುಸಿನೆಸ್ ಮ್ಯಾನೇಜ್ಮೆಂಟ್, ಅರ್ಥಶಾಸ್ತ್ರ, ಐಚ್ಛಿಕ ಆಂಗ್ಲ ಭಾಷೆ, ಭೌತಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಉರ್ದು ವಿಷಯದ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.
ವರ್ಗಾವಣೆ ನಿಯಮ ಮೂರರಲ್ಲಿ ತಿಳಿಸಿದಂತೆ ಹುದ್ದೆ ಸ್ಥಳಾಂತರವನ್ನು ಕಾರ್ಯ ಭಾರವಿರುವ ಅದೇ ವಲಯದ ಕಾಲೇಜಿಗೆ ವರ್ಗಾವಣೆ ಮಾಡಲಾಗಿದೆ. ಅದೇ ವಲಯದ ಅಥವಾ ಅದೇ ಜಿಲ್ಲಾ ವ್ಯಾಪ್ತಿಯ ಕಾಲೇಜಿನಲ್ಲಿ ಕಾರ್ಯಭಾರವಿಲ್ಲದಿದ್ದರೆ ಮಾತ್ರ ಬೇರೆ ವಲಯದ ಕಾರ್ಯ ಭಾರ ಇರುವ ಕಾಲೇಜಿಗೆ ಸ್ಥಳಾಂತರಿಸಲ ಅವಕಾಶ ಕಲ್ಪಿಸಲಾಗುತ್ತದೆ. ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದ ಮತ್ತು ಉಳಿಕೆ ರಾಜ್ಯ ವೃಂದಕ್ಕೆ ಒಳಪಡುವ ಬೋಧಕರನ್ನು ಆಯಾ ಸ್ಥಳದ ಕಾಲೇಜುಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ.