ಬೆಂಗಳೂರು: ಶಿಕ್ಷಕರು ನಿಗದಿಗಿಂತ ಅರ್ಧಗಂಟೆ ಮೊದಲೇ ಶಾಲೆಗೆ ಹಾಜರಾಗಿ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಸರ್ಕಾರಿ ಶಾಲೆಗಳಲ್ಲಿ ಪಠ್ಯ ಬೋಧನೆ, ಮಕ್ಕಳ ಕಲಿಕಾ ಗುಣಮಟ್ಟ ಬಲವರ್ಧನೆಗೊಳಿಸಲು ಅರ್ಧ ಗಂಟೆ ಮೊದಲೇ ಶಾಲೆಗೆ ಹಾಜರಾಗಲು ಶಿಕ್ಷಣ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಮಕ್ಕಳ ಶೈಕ್ಷಣಿಕ, ಬೌದ್ಧಿಕ, ಸಾಮಾಜಿಕ ಬೆಳವಣಿಗೆ ದೃಷ್ಟಿಯಿಂದ ಶಿಕ್ಷಕರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಪ್ರತಿ ಶಾಲೆಯಲ್ಲಿ ಮುಖ್ಯ ಶಿಕ್ಷಕರು, ಇತರೆ ಸಹ ಶಿಕ್ಷಕರು ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಮೊದಲು ಕರ್ತವ್ಯಕ್ಕೆ ಹಾಜರಾಗಿ ಇಲಾಖೆ ಮಾರ್ಗಸೂಚಿ ಅನುಸರಿಸಬೇಕು ಎಂದು ಹೇಳಲಾಗಿದೆ.
ರಜೆ ಮೇಲೆ ತೆರಳುವಾಗ, ಶಾಲೆಗೆ ಹಾಜರಾಗಿದ್ದ ವೇಳೆ ಅನ್ಯ ಕಾರ್ಯನಿಮಿತ್ತ ಹೊರಗೆ ಹೋಗುವುದಾದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪೂರ್ವಾನುಮತಿ ಪಡೆದುಕೊಳ್ಳಬೇಕು. ಶಾಲಾ ಅವಧಿಯಲ್ಲಿ ಶಿಕ್ಷಣಾಧಿಕಾರಿಗಳು, ಡಿಡಿಪಿಐ ಕಚೇರಿಗೆ ತೆರಳುವುದನ್ನು ಕಡ್ಡಾಯವಾಗಿ ನಿಯಂತ್ರಿಸಬೇಕು ಎಂದು ಇಲಾಖೆಯ ಆಯುಕ್ತರಾದ ಬಿ.ಬಿ. ಕಾವೇರಿ ಸುತ್ತೋಲೆ ಹೊರಡಿಸಿದ್ದಾರೆ.