ಬೆಂಗಳೂರು: ರಾಜ್ಯದ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಸಾರ್ವಜನಿಕರು ಅಥವಾ ಸಮುದಾಯದ ಸದಸ್ಯರು ಹಬ್ಬ ಸೇರಿ ವಿಶೇಷ ಸಂದರ್ಭಗಳಲ್ಲಿ ವಿಶೇಷ ಭೋಜನ ವ್ಯವಸ್ಥೆ ಮಾಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಮಾರ್ಗಸೂಚಿ ಪ್ರಕಟಿಸಲಾಗಿದೆ.
ಕೇಂದ್ರ ಸರ್ಕಾರ ಪಿಎಂ ಪೋಷಣ್ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಶಾಲೆಗಳಲ್ಲಿ ಸಮುದಾಯದ ಭಾಗವಹಿಸುವಿಕೆ ಕಾರ್ಯಕ್ರಮವಾಗಿ ಸರ್ಕಾರೇತರ ಸಂಸ್ಥೆಗಳು, ವ್ಯಾಪಾರ, ವಾಣಿಜ್ಯ, ಕೈಗಾರಿಕೆಗಳು ಸೇರಿದಂತೆ ಸಮುದಾಯದ ಯಾವುದೇ ಸದಸ್ಯರು ತಮ್ಮ ಹುಟ್ಟುಹಬ್ಬ, ಮದುವೆ, ವಿವಾಹ ವಾರ್ಷಿಕೋತ್ಸವ, ಹಬ್ಬಗಳು ಸೇರಿ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ದಿನದ ಭೋಜನ ಕಾರ್ಯಕ್ರಮದಡಿ ಪೌಷ್ಟಿಕ ಮತ್ತು ಆರೋಗ್ಯಕರ ಊಟ, ಆಹಾರ ಪದಾರ್ಥ ಒದಗಿಸಲು ಅನುಮತಿ ನೀಡಲಾಗಿದೆ.
ಇದಕ್ಕಾಗಿ ಶಿಕ್ಷಣ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ನೀಡಲಾಗಿದೆ. ಎಲ್ಲಾ ಶಾಲೆಗಳಲ್ಲಿಯೂ ವಿಶೇಷ ಭೋಜನದಲ್ಲಿ ತಾಜಾ, ಆರೋಗ್ಯಕರ ಮತ್ತು ಪೌಷ್ಟಿಕಾಂಶದ ಆಹಾರ ನೀಡಬೇಕು. ಸ್ಥಳೀಯವಾಗಿ ಲಭ್ಯ ಇರುವ ತರಕಾರಿ, ಕಾಳು, ಸಿರಿಧಾನ್ಯಗಳು ವಿಶೇಷ ಭೋಜನದ ಮೆನುವಿನಲ್ಲಿರಬೇಕು. ಆಹಾರ ಧಾನ್ಯಗಳ ಸಂಗ್ರಹಣೆ, ಅಡುಗೆ ಮಾಡುವಾಗ, ಬಡಿಸುವಾಗ ಸ್ವಚ್ಛತೆ, ನೈರ್ಮಲ್ಯದ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಋತುಮಾನದ ಹಣ್ಣುಗಳನ್ನು ನೀಡಬೇಕು. ವಿದ್ಯಾರ್ಥಿಗಳಿಗೆ ಊಟ ಬಡಿಸುವ ಮೊದಲು ಶಿಕ್ಷಕರು, ಅಡುಗೆಯವರು ರುಚಿ ನೋಡಬೇಕು ಎಂದು ತಿಳಿಸಲಾಗಿದೆ.