
ಬೆಂಗಳೂರು: ಸರ್ಕಾರದ ಸಭೆ ಸಮಾರಂಭಗಳ ಆಯೋಜನೆಯಲ್ಲಿ ಶಿಷ್ಟಾಚಾರ ಪಾಲಿಸುವಂತೆ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.
ಸರ್ಕಾರದ ಸಭೆ ಸಮಾರಂಭಗಳಿಗೆ ಜನ ಪ್ರತಿನಿಧಿಗಳನ್ನು ಆಹ್ವಾನಿಸುವಲ್ಲಿ ಅನುಸರಿಸಬೇಕಾದ ಶಿಷ್ಟಚಾರದ ಕುರಿತು ಸಮಗ್ರವಾದ ಮಾಹಿತಿಯನ್ನು, ಸರ್ಕಾರದ ಉಲ್ಲೇಖಿತ ಸುತ್ತೋಲೆಗಳನ್ವಯ ಹೊರಡಿಸಿದೆ.
ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಕಡ್ಡಾಯವಾಗಿ ಸದರಿ ಮಾನದಂಡಗಳನ್ನು ಅನುಸರಿಸಲು ಈಗಾಗಲೇ ಆಯುಕ್ತಾಲಯ ವ್ಯಾಪ್ತಿಯ ಎಲ್ಲ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದೆ.
ಆದರೂ ಸಹ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಿಷ್ಟಾಚಾರವನ್ನು ಸಮರ್ಪಕವಾಗಿ ಪಾಲನೇ ಮಾಡದೇ ಇರುವ ಕುರಿತು ಪ್ರಕರಣಗಳು ಹಕ್ಕು ಬಾಧ್ಯತಾ ಸಮಿತಿಯಲ್ಲಿ ದಾಖಲಾಗುತ್ತಿವೆ. ಸರ್ಕಾರವು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಲು ಅವಕಾಶಗಳಿರುತ್ತವೆ.
ಪ್ರಯುಕ್ತ, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸರ್ಕಾರದ ಸಭೆ/ಸಮಾರಂಭಗಳಲ್ಲಿ ಉಲ್ಲೇಖಿತ ಸುತ್ತೋಲೆಗಳಂತೆ ಕಡ್ಡಾಯವಾಗಿ ಶಿಷ್ಟಚಾರವನ್ನು ತಪ್ಪದೇ ಪಾಲಿಸಲು ಅಗತ್ಯ ಕ್ರಮ ವಹಿಸುವಂತೆ ಮತ್ತೊಮ್ಮೆ ಸೂಚಿಸಿದೆ.
