ಬೆಂಗಳೂರು: ರಾಜ್ಯ ಸರ್ಕಾರ ಪ್ರಾಥಮಿಕ ಹಂತದಿಂದ ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಪಠ್ಯದಲ್ಲಿ ನೈತಿಕ ಶಿಕ್ಷಣ ಬೋಧಿಸಲು ನಿರ್ಧರಿಸಿದೆ.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನೇತೃತ್ವದಲ್ಲಿ ನಡೆದ ವಿವಿಧ ಧರ್ಮಗುರುಗಳು, ಚಿಂತಕರು, ತಜ್ಞರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ದುಂಡು ಮೇಜಿನ ಸಭೆಯಲ್ಲಿ ಸಾಧಕ ಬಾಧಕಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ಮೌಲ್ಯಯುತ ಶಿಕ್ಷಣ ನೀಡಲು ಸಹಮತ ವ್ಯಕ್ತಪಡಿಸಲಾಗಿದೆ.
ಸಮಾಜದಲ್ಲಿ ನೈತಿಕ ಅಧಃಪತನ ಉಂಟಾಗಿದ್ದು, ಸಂಬಂಧಗಳಲ್ಲಿ ಅಂತರ ಹೆಚ್ಚಿದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಎಂಬ ಅಭಿಪ್ರಾಯ ವಿವಿಧ ವಲಯದಿಂದ ವ್ಯರ್ಥವಾದ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ನೈತಿಕ ಶಿಕ್ಷಣ ಬೋಧಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ದೇವರು, ಗುರು-ಹಿರಿಯರು ಎನ್ನುವ ಗೌರವ ಭಾವನೆ ಭಕ್ತಿಯನ್ನು ನೈತಿಕ ಶಿಕ್ಷಣ ಒಳಗೊಂಡಿರಬೇಕು. ನೈತಿಕತೆ ಮೌಲ್ಯಗಳು ಪಠ್ಯ ಪುಸ್ತಕಕ್ಕೆ ಸೀಮಿತವಾಗದೆ ದೈನಂದಿನ ಜೀವನದಲ್ಲಿ ಅಳವಡಿಕೆಯಾಗಬೇಕು. ರಾಜಕಾರಣಿಗಳು ಮೌಲ್ಯ ಅಳವಡಿಸಿಕೊಂಡು ಮೌಲ್ಯಯುತ ಶಿಕ್ಷಣಕ್ಕೆ ಮೇಲ್ಪಂತೆ ಹಾಕಬೇಕು. ಶಿಕ್ಷಕರು ನೈತಿಕ ಮೌಲ್ಯ ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂಬ ಸಲಹೆಗಳು ಕೇಳಿಬಂದಿವೆ.
ಇದರ ಅನುಷ್ಠಾನಕ್ಕೆ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ. ಸಭೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ, ಶಿವರಾತ್ರಿ ದೇಶಿಕೇದ್ರ ಸ್ವಾಮೀಜಿ, ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವರು ಭಾಗಿಯಾಗಿದ್ದರು.