
ಚೆನ್ನೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮುಡಿ ಮನೆ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ.
ಚೆನ್ನೈ ಮತ್ತು ವಿಲ್ಲುಪುರಂ ಜಿಲ್ಲೆಗಳಲ್ಲಿರುವ ಅವರ ನಿವಾಸದಲ್ಲಿ ಶೋಧ ನಡೆಸಲಾಗುತ್ತಿದೆ. ಅವರ ಪುತ್ರ ಹಾಗೂ ಸಂಸದ ಗೌತಮ್ ಸಿಗಮಣಿ ಅವರ ಮನೆಯಲ್ಲೂ ಹುಡುಕಾಟ ನಡೆದಿದೆ.
ಸಚಿವ ಪೊನ್ಮುಡಿ ಅವರಿಗೆ ಸೇರಿದ 9 ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದ್ದು, ಕೇಂದ್ರ ಭದ್ರತಾ ಪಡೆ ಜತೆಗೆ ಇಡಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
ಎರಡು ತಿಂಗಳ ಅವಧಿಯಲ್ಲಿ ತಮಿಳುನಾಡು ಸಚಿವರೊಬ್ಬರ ಮೇಲೆ ಕೇಂದ್ರೀಯ ಸಂಸ್ಥೆ ನಡೆಸಿದ ಎರಡನೇ ಶೋಧ ಇದಾಗಿದೆ. ಜೂನ್ 13 ರಂದು ನಗದು ಹಗರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ಸಚಿವ ಸೆಂಥಿಲ್ ಬಾಲಾಜಿ ಮೇಲೆ ಇಡಿ ದಾಳಿ ನಡೆಸಿ ನಂತರ ಅವರನ್ನು ಬಂಧಿಸಲಾಗಿತ್ತು.