ಕೋಲ್ಕತ್ತಾ: ಕೋಲ್ಕತ್ತಾ ಆರ್.ಜಿ.ಕರ್ ಕಾಲೇಜು ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮನೆ ಮೇಲೆ ಜಾರಿ ನಿರ್ದೇಶನಾಲಯ-ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೋಲ್ಕತ್ತಾ ಹಾಗೂ ಹೌರಾ ಸೇರಿದಂತೆ ಸಂದೀಪ್ ಘೋಷ್ ನಿವಾಸ ಹಾಗೂ ಸಂದೀಪ್ ಅವರ ನಿಕಟವರ್ತಿಗಳ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಕೋಲ್ಕತ್ತಾ, ಹೌರಾ ಸೇರಿದಂತೆ ಒಟ್ಟು 7 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಹಣಕಾಸು ವ್ಯವಹಾರದ ಅಕ್ರಮದಲ್ಲಿ ಸಂದೀಪ್ ಘೋಷ್ ಭಾಗಿಯಾಗಿರುವ ಆರೋಪದಲ್ಲಿ ಇತ್ತೀಚೆಗಷ್ಟೇ ಸಂದೀಪ್ ಘೋಷ್ ಅವರನ್ನು ಸಿಬಿಐ ಬಂಧಿಸಿತ್ತು. ಇದೀಗ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಸಂದೀಪ್ ಘೋಷ್ ಮನೆ ಮೇಲೆ ದಾಳಿ ನಡೆಸಿದೆ.
ಸಂದೀಪ್ ಘೋಷ್ 2021ರಿಂದ 2023ರ ಸೆಪ್ಟೆಂಬರ್ ವರೆಗೆ ಕೋಲ್ಕತ್ತಾ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಪ್ರಾಂಶುಪಾಲರಾಗಿದ್ದರು. ಬಳಿಕ 2023ರ ಅಕ್ಟೋಬರ್ ನಲ್ಲಿ ವರ್ಗಾವಣೆಯಾಗಿದ್ದರು. ನಂತರ ಒಂದೇ ತಿಂಗಳಲ್ಲಿ ಮತ್ತೆ ಆರ್.ಜಿ.ಕರ್ ಕಾಲೇಜು ಪ್ರಾಂಶುಪಾಲರಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಕಳೆದ ತಿಂಗಳು ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ನಡೆದ ಬಳಿಕ ಸಂದೀಪ್ ಘೋಷ್ ರಾಜೀನಾಮೆ ನೀಡಿದ್ದರು.