ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಶೇಷಾದ್ರಿಪುರಂ ಠಾಣೆಗೆ ವಾಲ್ಮೀಕಿ ನಿಗಮ ಅಭಿವೃದ್ಧಿ ನಿಗಮದ ಹಿಂದಿನ ಜಂಟಿ ನಿರ್ದೇಶಕ ಕಲ್ಲೇಶ್ ದೂರು ನೀಡಿದ್ದು, ಅಲ್ಲಿ ದಾಖಲಾಗಿದ್ದ ಎನ್.ಸಿ.ಆರ್. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ವರ್ಗಾವಣೆಯಾದ ಬಳಿಕ ಜಾರಿ ನಿರ್ದೇಶನಾಲಯದ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಯಾವುದೇ ತಪ್ಪು ಮಾಡದಿದ್ದರೂ ವಿಚಾರಣೆ ಮಾಡಿದ ಆರೋಪದಡಿ ಕಲ್ಲೇಶ್ ದೂರು ನೀಡಿದ್ದಾರೆ. ಕಾನೂನು ಬಾಹಿರವಾಗಿ ಇಡಿ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಬೈದು ನನ್ನ ಮೇಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಲ್ಲೇಶ್ ಆರೋಪಿಸಿದ್ದಾರೆ. ಇಡಿ ಅಧಿಕಾರಿಗಳಾದ ಮಿತ್ತಲ್ ಮತ್ತು ಕಣ್ಣನ್ ಅವರ ವಿರುದ್ಧ ಕಲ್ಲೇಶ್ ದೂರು ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಬಿ. ನಾಗೇಂದ್ರ ಹೆಸರು ಹೇಳುವಂತೆ ಇಡಿ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.