ಮಂಗಳೂರು: ಇಡಿ ಅಧಿಕಾರಿಗಳ ಸೋಗಿನಲ್ಲಿ ವಿಟ್ಲದ ಬೋಳಂತೂರು ಮಾರ್ಶದ ಸಿಂಗಾರಿ ಬೀಡಿ ಕಂಪನಿ ಮಾಲೀಕ ಸುಲೈಮಾನ್ ಅವರ ಮನೆಗೆ ನುಗ್ಗಿ 30 ಲಕ್ಷ ರೂ. ನಗದು ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಆರೋಪಿಯನ್ನು ಗುರುವಾರ ಬಂಧಿಸಿದ್ದಾರೆ.
ಕೇರಳದ ಕೊಲ್ಲಂ ಜಿಲ್ಲೆಯ ಪೆರಿನಾಡ್ ತ್ರಿಕಡವೂರಿನ ಮಾತಿಲಿಲ್ ಚಿರಕಲ್ ಜಂಕ್ಷನ್ ನಿವಾಸಿ ಅನಿಲ್ ಫೆರ್ನಾಂಡೀಸ್(49) ಬಂಧಿತ ಆರೋಪಿ. ಈತನಿಂದ 5 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಕಾರ್, ಕಾರ್ ಗೆ ಅಳವಡಿಸಲಾಗಿದ್ದ ನಕಲಿ ನಂಬರ್ ಪ್ಲೇಟ್ ವಶಕ್ಕೆ ಪಡೆಯಲಾಗಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆಗೆ ಇಳಿದಿದ್ದರು.
ಜನವರಿ 3ರಂದು ರಾತ್ರಿ ಸುಲೇಮಾನ್ ಅವರ ಮನೆಗೆ ತಮಿಳುನಾಡು ರಿಜಿಸ್ಟ್ರೇಷನ್ ಹೊಂದಿರುವ ಮಾರುತಿ ಎರ್ಟಿಗಾ ಕಾರಿನಲ್ಲಿ ಆಗಮಿಸಿದ್ದ ಆರು ಮಂದಿಯ ತಂಡ ಇಡಿ ಅಧಿಕಾರಿಗಳು ಎಂದು ನಂಬಿಸಿ ಹಣ ದೋಚಿ ಪರಾರಿಯಾಗಿದ್ದರು.