ಬೆಂಗಳೂರು: ಕೊಳವೆ ಬಾವಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಹೆಸರಲ್ಲಿ 969 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ನೋಟೀಸ್ ಜಾರಿ ಮಾಡಿದೆ.
198 ವಾರ್ಡ್ ಗಳಲ್ಲಿ ಕೊಳವೆ ಬಾವಿ ಕೊರೆಸುವ ಹಾಗೂ ಆರ್ ಒ ಘಟಕಗಳ ಸ್ಥಾಪನೆ ಹೆಸರಲ್ಲಿ 2016 ರಿಂದ 2018ರವರೆಗೆ ನಡೆದಿರುವ ಕಾಮಗಾರಿಯಲ್ಲಿ ಅಕ್ರಮವೆಸಗಲಾಗಿದೆ ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಎನ್. ಆರ್.ರಮೇಶ್ ದೂರು ನೀಡಿದ್ದರು.
ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇಡಿ ತನಿಖೆ ನಡೆಸುತ್ತಿದೆ. ಒಟ್ಟು 969 ಕೋಟಿ ರೂಪಾಯಿಯಲ್ಲಿ 9,588 ಕೊಳವೆ ಬಾವಿ ಕೊರೆಸಲಾಗಿದೆ ಎಂದು 976 ಆರ್ ಒ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದರು.
ಇದರಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಎನ್.ಆರ್. ರಮೇಶ್ 2019ರಲ್ಲಿ ಎಸಿಬಿಯಲ್ಲಿ ದೂರು ದಾಖಲಿಸಿದ್ದರು. ಎಸಿಬಿ ರದ್ದಾದ ಬಳಿಕ ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ ವಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಇಡಿ ಅಧಿಕಾರಿಗಳು ಬಿಬಿಎಂಪಿ ಆಯುಕ್ತರಿಗೆ ನೋಟೀಸ್ ಜಾರಿ ಮಾಡಿದ್ದಾರೆ.