ನವದೆಹಲಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ನಿವೇಶನ ಹಂಚಿಕೆ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಹೊಸ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ನಿವೇಶನ ಹಂಚಿಕೆಯ ಸಂದರ್ಭದಲ್ಲಿ ಅಕ್ರಮ ನಡೆದಿರುವ ಕುರಿತು ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಸಿಎಂ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ 14 ನಿವೇಶನಗಳ ಹಸ್ತಾಂತರದ ಹಿಂದೆ ಹಲವಾರು ಅವ್ಯವಹಾರಗಳು ನಡೆದಿರುವುದಕ್ಕೆ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಮುಡಾದಿಂದ ಬೇನಾಮಿ ಹಾಗೂ ಇನ್ನಿತರ ವ್ಯವಹಾರಗಳ ಮೂಲಕ 1095 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದ್ದು, ಇದರ ಮೌಲ್ಯ ಬರೋಬ್ಬರಿ 700 ಕೋಟಿ ರೂ. ಎಂದು ತನಿಖೆಯಲ್ಲಿ ಪತ್ತೆಯಾಗಿದೆ. ಈ ಕುರಿತಾಗಿ ಇತ್ತೀಚೆಗೆ ಕರ್ನಾಟಕ ಲೋಕಾಯುಕ್ತಕ್ಕೆ ಇಡಿ ಪತ್ರ ಬರೆದಿದೆ ಎಂದು ಹೇಳಲಾಗಿದೆ.
ಸಿದ್ದರಾಮಯ್ಯ ಪತ್ನಿ ಪಾರ್ವತಿಯವರಿಗೆ ಮುಡಾ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಶಾಸನಬದ್ಧ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಸಿದ್ದರಾಮಯ್ಯ ಆಪ್ತ ಸಹಾಯಕರಲ್ಲಿ ಒಬ್ಬರಾದ ದಿನೇಶ್ ಕುಮಾರ್ ಅನಾವಶ್ಯಕ ಪ್ರಭಾವ ಬೀರಿದ್ದಾರೆ. ಪಾರ್ವತಿಯವರಿಗೆ ನಿವೇಶನ ದೊರೆತಾಗ ಅವರ ಪುತ್ರ ಯತೀಂದ್ರ ಮುಡಾ ಮಂಡಳಿಯಲ್ಲಿದ್ದರು. ಪತಿ ಸಿದ್ದರಾಮಯ್ಯ ವಿಪಕ್ಷ ನಾಯಕನಾಗಿದ್ದರು. ಮುಡಾದಿಂದ ಕೆಲವೊಂದು ನಿರ್ಮಾಣ ಕಾಮಗಾರಿ ನಡೆಸುತ್ತಿದ್ದ ಜಾಗವನ್ನೇ ಸಿದ್ದರಾಮಯ್ಯ ಭಾಮೈದ ಮಲ್ಲಿಕಾರ್ಜುನ ಖರೀದಿಸಿದ್ದಾರೆ. ಕೃಷಿ ಜಮೀನು ಎಂದು ತೋರಿಸಿ ಆ ಜಾಗವನ್ನು ಖರೀದಿಸಿದ್ದಾರೆ. ಜಮೀನು ಮಾಲೀಕ ಮಾರುವ ಮುನ್ನವೇ ಮುಡಾ ನಿವೇಶನ ಪಡೆದಿದ್ದಾರೆ. ಪಾರ್ವತಿಯವರಿಗೆ ಯಾವ ಭಾಗದ ನಿವೇಶನವನ್ನು ನೀಡಬೇಕು ಎಂದು ಮುಡಾ ಆಯುಕ್ತರೇ ಆಯ್ಕೆ ಮಾಡಿ ಹಂಚಿದ್ದಾರೆ ಎಂದು ಹೇಳಲಾಗಿದೆ.