ನವದೆಹಲಿ: ಪರಾರಿಯಾಗಿರುವ ಆಭರಣ ವ್ಯಾಪಾರಿ ನೀರವ್ ಮೋದಿಗೆ ಸೇರಿದ 253.62 ಕೋಟಿ ರೂಪಾಯಿ ಮೊತ್ತದ ಆಸ್ತಿ, ಆಭರಣ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಗಳನ್ನು ಜಾರಿ ನಿರ್ದೇಶನಾಲಯ(ಇಡಿ) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ಜಪ್ತಿ ಮಾಡಿದೆ.
ಸೆಕ್ಷನ್ 420, 467, 471, 120-ಬಿ ಅಡಿಯಲ್ಲಿ ದಾಖಲಾದ ಎಫ್‌ಐಆರ್ ಆಧರಿಸಿ ನೀರವ್ ಮೋದಿ ಸಮೂಹದ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನೀರವ್ ಮೋದಿ ಪ್ರಸ್ತುತ ಯುಕೆ ಜೈಲಿನಲ್ಲಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆದಿದೆ. ಪಿ.ಎನ್.ಬಿ. ವಂಚನೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ(ಸಿಬಿಐ) ತನಿಖೆ ನಡೆಸುತ್ತಿದೆ.
ಅಂದಾಜು 2 ಬಿಲಿಯನ್ ಡಾಲರ್ ಮೊತ್ತದ ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪ ಅವರ ಮೇಲಿದೆ. 14,000 ಕೋಟಿ ಪಿ.ಎನ್.ಬಿ. ಹಗರಣಕ್ಕೆ ಸಂಬಂಧಿಸಿದಂತೆ ವಂಚನೆ ಮತ್ತು ಮನಿ ಲಾಂಡರಿಂಗ್‌ಗಾಗಿ ನೀರವ್ ಮೋದಿ ಭಾರತಕ್ಕೆ ಬೇಕಾದ ವ್ಯಕ್ತಿಯಾಗಿದ್ದಾರೆ. ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಬಹುದು ಎಂದು ತೀರ್ಪು ನೀಡಿದ ಯುಕೆ ನ್ಯಾಯಾಲಯ ಆತನ ವಿರುದ್ಧ ಪ್ರಾಥಮಿಕವಾಗಿ ಸಾಕ್ಷ್ಯವಿದೆ ಎಂದು ಹೇಳಿದೆ.