5 ಸಾವಿರ ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್ ಮತ್ತು ಡಿಎಚ್‌ಎಫ್‌ಎಲ್ ಸಂಸ್ಥೆಯ ಪ್ರೊಮೋಟರ್ಸ್ ಆಗಿರುವ ಕಪಿಲ್ ವಾಧವಾನ್ ಮತ್ತು ಧೀರಜ್ ವಾಧವಾನ್ ಅವರ ವಿಚಾರಣೆಯನ್ನು ಜಾರಿ ನಿರ್ದೇಶನಾಲಯ ನಡೆಸಿದ್ದು, ಇದೀಗ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಈ ಆರೋಪ ಪಟ್ಟಿಯಲ್ಲಿ ಸ್ಪೋಟಕ ಮಾಹಿತಿಗಳನ್ನು ಜಾರಿ ನಿರ್ದೇಶನಾಲಯ ಬಹಿರಂಗಪಡಿಸಿದ್ದು, ವಿಚಾರಣೆ ವೇಳೆ ರಾಣಾ ಕಪೂರ್ ತಮಗೆ ಇಷ್ಟವಿಲ್ಲದಿದ್ದರೂ ಯಾವ ರೀತಿ ಎಂ.ಎಫ್. ಹುಸೇನ್ ಅವರಿಂದ ಬರೋಬ್ಬರಿ 2 ಕೋಟಿ ರೂಪಾಯಿಗಳಿಗೆ ಪೇಂಟಿಂಗ್ ಖರೀದಿಸುವಂತೆ ಮಾಡಲಾಯಿತು ಎಂಬ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೇ ಈ ಹಣವನ್ನು ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋನಿಯಾ ಗಾಂಧಿಯವರ ಆಸ್ಪತ್ರೆ ವೆಚ್ಚಕ್ಕೆ ಬಳಸಿಕೊಂಡಿರುವ ಸಂಗತಿ ಬಳಿಕ ತಿಳಿದುಬಂತು ಎಂದಿದ್ದಾರೆ.
ಅಲ್ಲದೇ ಅಂದು ಪೆಟ್ರೋಲಿಯಂ ಖಾತೆ ಸಚಿವರಾಗಿದ್ದ ಮುರಳಿ ಧಿಯೋರಾ, ನೀವು ಪೇಂಟಿಂಗ್ ಖರೀದಿಸದಿದ್ದರೆ ಗಾಂಧಿ ಪರಿವಾರದೊಂದಿಗೆ ಸಂಪರ್ಕ ಕಳೆದುಕೊಳ್ಳುತ್ತೀರಿ. ಇದು ಯೆಸ್ ಬ್ಯಾಂಕ್ ವ್ಯವಹಾರಗಳ ಮೇಲೂ ಪರಿಣಾಮ ಬೀರಬಹುದು ಎಂದು ತಿಳಿಸಿದ್ದರು. ಜೊತೆಗೆ ನೀವು ಈ ಡೀಲ್ ಒಪ್ಪಿಕೊಳ್ಳದಿದ್ದರೆ ನಿಮಗೆ ʼಪದ್ಮಭೂಷಣʼ ಪ್ರಶಸ್ತಿ ಸಹ ಸಿಗದಿರಬಹುದು ಎಂದು ಪರೋಕ್ಷವಾಗಿ ಎಚ್ಚರಿಸಿದ್ದರೆಂದು ರಾಣಾ ಕಪೂರ್ ಇಡಿ ಮುಂದೆ ಬಾಯ್ಬಿಟ್ಟಿದ್ದಾರೆ.
ತಾನು ಹೆಚ್.ಎಸ್.ಬಿ.ಸಿ ಬ್ಯಾಂಕ್ ನಲ್ಲಿ ಹೊಂದಿದ್ದ ಖಾಸಗಿ ಖಾತೆಯಿಂದ ಎರಡು ಕೋಟಿ ರೂಪಾಯಿಗಳಿಗೆ ಚೆಕ್ ಮೂಲಕ ಆ ಪೇಂಟಿಂಗ್ ಖರೀದಿ ಮಾಡಿದೆ. ಈ ವ್ಯವಹಾರಗಳೆಲ್ಲವೂ ಪ್ರಿಯಾಂಕಾ ಗಾಂಧಿಯವರ ಕಛೇರಿಯಲ್ಲಿಯೇ ನಡೆಯಿತು. ಆ ಬಳಿಕ ನಡೆದ ಮುರಳಿ ಧಿಯೋರಾ ಭೇಟಿ ಸಂದರ್ಭದಲ್ಲಿ ಈ ಹಣವನ್ನು ಸೋನಿಯಾ ಗಾಂಧಿಯವರ ಚಿಕಿತ್ಸೆಗೆ ಬಳಸಿಕೊಳ್ಳಲಾಯಿತು ಎಂಬ ಸಂಗತಿ ತಿಳಿದುಬಂತು ಎಂದಿದ್ದಾರೆ.
ಅಲ್ಲದೇ ಪೇಂಟಿಂಗ್ ಖರೀದಿ ಪ್ರಕ್ರಿಯೆ ನಡೆಯುವ ಮುನ್ನ ಮುರಳಿ ಧಿಯೋರಾ ಅವರ ಪುತ್ರ ಮಿಲಿಂದ್ ಧಿಯೋರಾ ತಮ್ಮನ್ನು ಹಲವು ಬಾರಿ ಭೇಟಿ ಮಾಡಿದ್ದರು. ಹೀಗಾಗಿ ನಾನು ಒತ್ತಡದ ಕಾರಣಕ್ಕೆ ಪೇಂಟಿಂಗ್ ಕಲೆಕ್ಷನ್ ಮಾಡುವ ಅಭಿರುಚಿಯಿಲ್ಲದಿದ್ದರೂ ಹಾಗೂ ನನ್ನ ಕುಟುಂಬ ಸದಸ್ಯರ ಇಚ್ಚೆಗೆ ವಿರುದ್ದವಾಗಿ ಅದನ್ನು ಖರೀದಿಸಬೇಕಾಯಿತು ಎಂಬ ಸಂಗತಿಯನ್ನು ರಾಣಾ ಕಪೂರ್ ಬಹಿರಂಗಪಡಿಸಿದ್ದಾರೆ.