alex Certify ‘ಮಹಿಳೆಯರು ತಯಾರಿಸಿದ ವಸ್ತುಗಳಿಗೆ ಮಾರಾಟ ವ್ಯವಸ್ಥೆ ದೊರೆತಾಗ ಮಾತ್ರ ಆರ್ಥಿಕ ಶಕ್ತಿ ಪಡೆಯಲು ಸಾಧ್ಯ’ : ಸಿಎಂ ಸಿದ್ದರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮಹಿಳೆಯರು ತಯಾರಿಸಿದ ವಸ್ತುಗಳಿಗೆ ಮಾರಾಟ ವ್ಯವಸ್ಥೆ ದೊರೆತಾಗ ಮಾತ್ರ ಆರ್ಥಿಕ ಶಕ್ತಿ ಪಡೆಯಲು ಸಾಧ್ಯ’ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಮಹಿಳೆಯರು ತಯಾರಿಸಿದ ವಸ್ತುಗಳಿಗೆ ಮಾರಾಟ ವ್ಯವಸ್ಥೆ ದೊರೆತಾಗ ಮಾತ್ರ ಆರ್ಥಿಕ ಶಕ್ತಿ ಪಡೆಯಲು ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ಸ್ವಸಹಾಯ ಸಂಘಗಳು ತಯಾರಿಸಿರುವ ಉತ್ಪನ್ನಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಗಾಟಿಸಿ, ಮಾತನಾಡಿದರು.

ಮಹಿಳೆಯರು ತಯಾರಿಸಿದ ವಸ್ತುಗಳಿಗೆ ಮಾರಾಟ ವ್ಯವಸ್ಥೆ ದೊರೆತಾಗ ಮಾತ್ರ ಆರ್ಥಿಕ, ಸಾಮಾಜಿಕವಾಗಿ ಶಕ್ತಿ ಪಡೆಯಲು ಸಾಧ್ಯ. ಗುಣಮಟ್ಟದ ವಸ್ತುಗಳನ್ನು ತಯಾರಿಸುವ ಶಕ್ತಿ ಉತ್ಪಾದಕರಿಗೆ ಇರಬೇಕು.
ಮಾರಾಟ ಹೆಚ್ಚಾದರೆ ಉತ್ಪನ್ನಗಳ ಉತ್ಪಾದನೆಯೂ ಹೆಚ್ಚಾಗಲು ಸಾಧ್ಯ. ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಕ್ಕು ಅದರಿಂದ ಜೀವನ ನಡೆಯಬೇಕು. ಮಹಿಳೆಯರು ಕುಟುಂಬದ ಜವಾಬ್ದಾರಿಯನ್ನು ವಹಿಸುತ್ತಾರೆ. ಅವರು ಶ್ರಮಜೀವಿಗಳು. ಶೇ 50 ರಷ್ಟಿರುವ ಮಹಿಳೆಯರು ಶತಶತಮಾನಗಳಿಂದ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಮಹಿಳೆಯರು ದೌರ್ಜನ್ಯ, ಶೋಷಣೆಗೆ ಒಳಗಾಗಿರುವ ವರ್ಗ. ಈ ವರ್ಗ ಶಿಕ್ಷಣ ದೊರೆತು ಆರ್ಥಿಕವಾಗಿ ಸಬಲರಾಗಬೇಕು.

ಶಕ್ತಿ ವೃದ್ಧಿ ಮಾಡಲು ವಸ್ತು ಪ್ರದರ್ಶನ ಮಾರಾಟ ಮೇಳಗಳನ್ನು ಸರ್ಕಾರ ಏರ್ಪಾಡು ಮಾಡಿದೆ. ಉದ್ಯೋಗ ಸೃಷ್ಟಿಸಲು ಆರ್ಥಿಕ ನೆರವು, ತರಬೇತಿ, ಸ್ವಯಂ ಉದ್ಯೋಗಕ್ಕೆ ಶಕ್ತಿ ಅಗತ್ಯ. ಗುಣಮಟ್ಟದ ವಸ್ತುಗಳನ್ನು ತಯಾರಿಸುವ ಶಕ್ತಿ ಉತ್ಪಾದಕರಿಗೆ ಇರಬೇಕು. ಸ್ಪರ್ಧಾತ್ಮಕ ಸಮಾಜದಲ್ಲಿ ನಾವೂ ನಮ್ಮ ಅಸ್ತಿತ್ವ ಕಾಪಾಡಿಕೊಳ್ಳಬೇಕು. ರಾಜ್ಯದಲ್ಲಿ 3.48 ಲಕ್ಷ ಸ್ವಸಹಾಯ ಸಂಘಗಳಿವೆ. 39.30 ಲಕ್ಷ ಕುಟುಂಬಗಳು ಗ್ರಾಮೀಣ ಜೀವನೋಪಾಯಡಿಯಲ್ಲಿ ಬರುತ್ತವೆ. ನಗರ ಪ್ರದೇಶದಲ್ಲಿ 33 ಸಾವಿರ ಸ್ವಸಹಾಯ ಸಂಘಗಳಿವೆ. 3.96 ಲಕ್ಷ ಕುಟುಂಬಗಳು ತೊಡಗಿಸಿಕೊಂಡಿವೆ. ಇಷ್ಟೊಂದು ಸ್ವಸಹಾಯ ಸಂಘಗಳಿಗೆ ಆರ್ಥಿಕ ನೆರವು ಸರ್ಕಾರ ನೀಡಿದೆ.
ಪ್ರತಿ ಸ್ವಸಹಾಯ ಸಂಘಕ್ಕೆ 1 ಲಕ್ಷ ರೂ.ಗಳ ನೆರವು ಸರ್ಕಾರ ನೀಡುತ್ತದೆ. 131 ಕೋಟಿ ರೂ.ಗಳನ್ನು ವ್ಯಯ ಮಾಡಿ 12,600 ಗುಂಪುಗಳಿಗೆ ಈ ವರ್ಷ ಸಹಾಯ ಮಾಡಿದ್ದೇವೆ. ಕಳೆದ ವರ್ಷ ವ್ಯಾಪಾರ ಮೇಳದಲ್ಲಿ 3 ಕೋಟಿ ರೂ.ಗಳ ವಹಿವಾಟು ನಡೆದಿದೆ. ಮಹಿಳೆಯರನ್ನು ಸಬಲರನ್ನಾಗಿ ಮಾಡಲು ನಮ್ಮ ಸರ್ಕಾರ ಎಲ್ಲಾ ರೀತಿಯ ಸಹಾಯ ಮಾಡುತ್ತಿದೆ.

ಶಕ್ತಿ ಯೋಜನೆಯಡಿ ಎಲ್ಲಾ ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣವನ್ನು ನೀಡಿದ್ದು ಮಹಿಳೆಯರು ಮನೆಗಳಿಗೆ ಸೀಮಿತವಾಗದೆ ರಾಜ್ಯದ ಮೂಲೆ ಮೂಲೆಗಳಿಗೂ ಹೋಗಬೇಕು. 100 ಕೋಟಿಗೂ ಹೆಚ್ಚು ಬಾರಿ ಮಹಿಳೆಯರು ಉಚಿತವಾಗಿ ಬಸ್ಸುಗಳಲ್ಲಿ ಓಡಾಡಿದ್ದಾರೆ. ಪ್ರತಿ ದಿನ 50-60 ಲಕ್ಷ ಜನ ಮಹಿಳೆಯರು ಬಸ್ಸುಗಳಲ್ಲಿ ಓಡಾಡಿದ್ದಾರೆ.

ಗೃಹ ಲಕ್ಷ್ಮೀ ಯೋಜನೆಯಡಿ 2000 ರೂ.ಗಳನ್ನು ಪಡೆಯಲು ಈವರೆಗೆ 1.17 ಕೋಟಿ ಜನನೋಂದಾಯಿಸಿಕೊಂಡಿದ್ದಾರೆ. 1.14 ಲಕ್ಷ ಮಹಿಳೆಯರಿಗೆ 2000 ರೂ.ಗಳನ್ನು ನೀಡಲಾಗುತ್ತಿದೆ. 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. 170 ರೂ.ಗಳನ್ನು ಪ್ರತಿಯೊಬ್ಬರಿಗೂ ಅಕ್ಕಿಗೆ ಬದಲಾಗಿ ಕೊಡುತ್ತಿದ್ದೇವೆ. ಯುವನಿಧಿ ಯೋಜನೆಯ ಪ್ರಕ್ರಿಯೆ ನಡೆಯುತ್ತಿದ್ದು ಜನವರಿಯಲ್ಲಿ ಕೊಡಲು ಪ್ರಯತ್ನ ಮಾಡಲಾಗುತ್ತಿದೆ.
ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಬೇಕು. ಅವರೂ ದೇಶದ ಜಿಡಿಪಿಗೆ ಕೊಡುಗೆಯನ್ನು ನೀಡಬೇಕು. ಮಾರುಕಟ್ಟೆಯಲ್ಲಿ ಮಹಿಳೆಯರಿಗೆ ಹೆಚ್ಚು ಲಾಭ ಸಿಗಲು ಗುಣಮಟ್ಟದ ವಸ್ತುಗಳನ್ನು ತಯಾರು ಮಾಡಬೇಕು. ಅದಕ್ಕೆ ಅಗತ್ಯವಿರುವ ತಾಂತ್ರಿಕ ಜ್ಞಾನವನ್ನು ಕೊಡುವ ಕೆಲಸವನ್ನು ಇಲಾಖೆ ಮಾಡುತ್ತದೆ. ಯುವಕ, ಯುವತಿಯರಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ಕೌಶಲ್ಯಾಭಿವೃದ್ಧಿ ಮಾಡಿದರೆ 2 ವರ್ಷಗಳಲ್ಲಿ ಉದ್ಯೋಗ ಸಿಗುವುದು ಸುಲಭವಾಗುತ್ತದೆ. ತರಬೇತಿ ಮತ್ತು ಯುವನಿಧಿ ಎರಡೂ ಆದರೆ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಬದಲಾವಣೆ ತರಲು ಸಾಧ್ಯವಾಗುತ್ತದೆ. ಯುವ ಶಕ್ತಿ, ಮಹಿಳೆಯರು ರಾಜ್ಯದ ಸಂಪತ್ತು. ಆದ್ದರಿಂದ ನಿಮಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...