ಗಣೇಶ ಚತುರ್ಥಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಗಣೇಶ ವಿಗ್ರಹಕ್ಕೆ ಬೇಡಿಕೆ ಹೆಚ್ಚಾಗಿದೆ.
ಪಿಒಪಿ ಗಣಪತಿಗಳು ನೀರಿನಲ್ಲಿ ಸುಲಭವಾಗಿ ಕರಗುವುದಿಲ್ಲವಾದ್ದರಿಂದ ಬಹುತೇಕರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳತ್ತ ಮನಸ್ಸು ಮಾಡುತ್ತಿದ್ದಾರೆ. ಈ ವರ್ಷವೂ ಕೋವಿಡ್ 19 ಕರಿ ನೆರಳು ಇರೋದ್ರಿಂದ ಹಬ್ಬದ ಸಂಭ್ರಮಾಚರಣೆಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಈ ನಡುವೆ ನಾಸಿಕ್ ಕೇಂದ್ರ ಕಾರಾಗೃಹದ ಕೈದಿಗಳು ಗಣೇಶ ಚತುರ್ಥಿ ಹಿನ್ನೆಲೆ 2000ಕ್ಕೂ ಅಧಿಕ ಪರಿಸರ ಸ್ನೇಹಿ ಗಣಪತಿ ವಿಗ್ರಹ ತಯಾರಿಸುವ ಗುರಿ ಹೊಂದಿದ್ದಾರೆ.
ಗಣೇಶ ಮೂರ್ತಿಯನ್ನು ತಯಾರಿಸುವ ಮುನ್ನ ಕೈದಿಗಳಿಗೆ ಸಾಗರ್ ಪವಾರ್ ಎಂಬವರು ಸೂಕ್ತ ತರಬೇತಿ ನೀಡಿದ್ದಾರೆ. 35 ವರ್ಷದ ಪವಾರ್ ರಾಯಗಢದಲ್ಲಿ ಗಣೇಶ ಮೂರ್ತಿ ತಯಾರಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ನಾಸಿಕ್ ಸೂಪರಿಟೆಂಡೆಂಟ್ ಪ್ರಮೋದ್ ವಾಘ್ ಈ ವಿಚಾರವಾಗಿ ಮಾತನಾಡಿದ್ದು, ಪ್ರತಿ ವರ್ಷ ಕೈದಿಗಳು 600 -700 ಪರಿಸರ ಸ್ನೇಹಿ ಗಣಪತಿ ವಿಗ್ರಹ ತಯಾರಿಸುತ್ತಾರೆ ಎಂದು ಹೇಳಿದ್ರು.
ಇನ್ನು ಈ ವಿಚಾರವಾಗಿ ಮಾತನಾಡಿದ ನಾಸಿಕ್ ಜೈಲಿನ ಜೈಲರ್ ರಾಜಕುಮಾರ್ ಸಾಲಿ, ಪವಾರ್ 16 ಮಂದಿ ಕೈದಿಗಳಿಗೆ 20 ಬಗೆಯ ಗಣೇಶ ವಿಗ್ರಹ ತಯಾರಿಸಲು ತರಬೇತಿ ನೀಡಿದ್ದಾರೆ. ಈ ಗಣಪತಿ ವಿಗ್ರಹಕ್ಕೆ ಬೆಲೆಯನ್ನು ಇನ್ನೂ ನಿಗದಿ ಮಾಡಿಲ್ಲ. ಆದರೆ ಮಾರುಕಟ್ಟೆ ದರಕ್ಕಿಂತ ಈ ವಿಗ್ರಹಗಳ ಬೆಲೆ ಕಡಿಮೆ ಇರಲಿದೆ ಎಂದು ಹೇಳಿದ್ರು.