ನವದೆಹಲಿ: ಭಾರತದ ಚುನಾವಣಾ ಆಯೋಗವು ಪಶ್ಚಿಮ ಬಂಗಾಳ, ಛತ್ತೀಸ್ಗಢ, ಬಿಹಾರ ಮತ್ತು ಮಹಾರಾಷ್ಟ್ರದ ಸಂಸದೀಯ ಕ್ಷೇತ್ರಗಳು ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಉಪ ಚುನಾವಣೆಯ ದಿನಾಂಕವನ್ನು ಶನಿವಾರ ಪ್ರಕಟಿಸಿದೆ.
ಚುನಾವಣಾ ಆಯೋಗದ ಪ್ರಕಾರ, ಪಶ್ಚಿಮ ಬಂಗಾಳದ ಅಸನ್ಸೋಲ್ ಲೋಕಸಭಾ ಕ್ಷೇತ್ರ ಮತ್ತು ಪಶ್ಚಿಮ ಬಂಗಾಳದ ಬಲ್ಲಿಗುಂಗೆ ವಿಧಾನಸಭಾ ಕ್ಷೇತ್ರ, ಛತ್ತೀಸ್ಗಢದ ಖೈರಗಢ ವಿಧಾನಸಭಾ ಕ್ಷೇತ್ರ, ಬಿಹಾರದ ಬೋಚಹಾನ್(ಎಸ್ಸಿ) ವಿಧಾನಸಭಾ ಕ್ಷೇತ್ರ ಮತ್ತು ಮಹಾರಾಷ್ಟ್ರದ ಕೊಲ್ಲಾಪುರ ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ.
ಗೆಜೆಟ್ ಅಧಿಸೂಚನೆ ಹೊರಡಿಸಿದ ದಿನಾಂಕ: ಮಾರ್ಚ್ 17
ನಾಮ ಪತ್ರ ಸಲ್ಲಿಕೆ ಕೊನೆಯ ದಿನಾಂಕ ಮಾರ್ಚ್ 24,
ನಾಮ ಪತ್ರ ಪರಿಶೀಲನೆಯ ದಿನಾಂಕ ಮಾರ್ಚ್ 25,
ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನ ಮಾರ್ಚ್ 28
ಮತದಾನದ ದಿನಾಂಕ ಏಪ್ರಿಲ್ 12
ಮತ ಎಣಿಕೆ ದಿನಾಂಕ ಏಪ್ರಿಲ್ 16
ಈ ಚುನಾವಣೆಗಳಿಗೆ ಜನವರಿ 1 ಕ್ಕೆ ಸಂಬಂಧಿಸಿದಂತೆ ಮೇಲೆ ತಿಳಿಸಲಾದ ವಿಧಾನಸಭಾ ಕ್ಷೇತ್ರಕ್ಕೆ ಪ್ರಕಟಿಸಲಾದ ಮತದಾರರ ಪಟ್ಟಿಯನ್ನು ಬಳಸಲಾಗುವುದು ಎಂದು ಚುನಾವಣಾ ಆಯೋಗವು ಅಧಿಸೂಚನೆಯಲ್ಲಿ ತಿಳಿಸಿದೆ.
ಎಲ್ಲಾ ಮತಗಟ್ಟೆಗಳಲ್ಲಿ ಉಪಚುನಾವಣೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್ಗಳನ್ನು ಬಳಸಲು ಆಯೋಗ ನಿರ್ಧರಿಸಿದೆ. ಉಪಚುನಾವಣೆ ವೇಳಾಪಟ್ಟಿ ಘೋಷಣೆಯೊಂದಿಗೆ, ಕ್ಷೇತ್ರದ ಸಂಪೂರ್ಣ ಅಥವಾ ಯಾವುದೇ ಭಾಗವನ್ನು ಒಳಗೊಂಡಿರುವ ಜಿಲ್ಲೆಗಳಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ.
ಮತದಾರರ ಗುರುತಿಸುವಿಕೆ
ಮತದಾರರ ಫೋಟೊ ಗುರುತಿನ ಚೀಟಿ(ಇಪಿಐಸಿ) ಮತದಾರರ ಗುರುತಿನ ಪ್ರಮುಖ ದಾಖಲೆಯಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಆದಾಗ್ಯೂ, ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಭಾರತೀಯ ಪಾಸ್ಪೋರ್ಟ್ ಸೇರಿದಂತೆ ಇತರ ಗುರುತಿನ ದಾಖಲೆಗಳನ್ನು ಸಹ ಮತದಾನ ಕೇಂದ್ರದಲ್ಲಿ ತೋರಿಸಬಹುದು.