
ಬೆಂಗಳೂರು: ರಾಜ್ಯದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಚಿಕನ್ ಪ್ರಿಯರು ಆತಂಕದಲ್ಲಿದ್ದಾರೆ. ಇದರ ಬೆನ್ನಲ್ಲೇ ಕೋಳಿ ಮಾಂಸ ಅಥವಾ ಮೊಟ್ಟೆಗಳನ್ನು ಸೇವಿಸುವುದರಿಂದ ಈ ಕಾಯಿಲೆ ಮನುಷ್ಯರಿಗೆ ಬರುವುದಿಲ್ಲ ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸ್ಪಷ್ಟಪಡಿಸಿದೆ.
ಇಲಾಖೆಯಿಂದ ಈ ಕುರಿತಾಗಿ ಮಾರ್ಗಸೂಚಿ ಹೊರಡಿಸಲಾಗಿದೆ. ಸೋಂಕಿತ ಕೋಳಿ ಮಾಂಸವನ್ನು ಚೆನ್ನಾಗಿ ಬೇಯಿಸದೆ, ಅವುಗಳ ಹಸಿ ಮೊಟ್ಟೆಯ ಸೇವನೆಯಿಂದ ರೋಗ ತಗಲುವ ಸಾಧ್ಯತೆಗಳಿವೆ. ಆದರೆ, ಕೋಳಿ ಮಾಂಸ ಮತ್ತು ಮೊಟ್ಟೆಯನ್ನು 70 ಡಿಗ್ರಿ ಸೆಂಟಿಗ್ರೇಡ್ ಗೂ ಅಧಿಕ ಉಷ್ಣಾಂಶದಲ್ಲಿ ಬೇಯಿಸಿ ತಿನ್ನಬಹುದು. ಕೋಳಿ ಮಾಂಸವನ್ನು ಸಿದ್ಧಪಡಿಸಿದ ನಂತರ ಕೈಗಳನ್ನು ನಂಜು ನಾಶಕದಿಂದ ತೊಳೆಯಬೇಕು ಎಂದು ತಿಳಿಸಲಾಗಿದೆ.
ಹಕ್ಕಿ ಜ್ವರ ಸಾಂಕ್ರಾಮಿಕ ರೋಗ, ಮುನ್ನೆಚ್ಚರಿಕೆಯಿಂದ ತಡೆಯಬಲ್ಲ ಕಾಯಿಲೆಯಾಗಿದ್ದು, ಕಾಯಿಲೆಯ ಲಕ್ಷಣಗಳು ರೋಗ ಕೋಳಿಗಳಲ್ಲಿ ಕಾಣಿಸಿಕೊಂಡ ಕೂಡಲೇ ಸಮೀಪದ ಮಾಹಿತಿ ಕೇಂದ್ರ ಅಥವಾ ಪಶು ವೈದ್ಯಕೀಯ ಸಂಸ್ಥೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ.
ಹಕ್ಕಿ ಜ್ವರ ಪೀಡಿತ ಕೋಳಿಗಳು, ಹಕ್ಕಿಗಳು ಮತ್ತು ಬಾತುಕೋಳಿಗಳ ಸಂಪರ್ಕಕ್ಕೆ ಬರದಂತೆ ಎಚ್ಚರಿಕೆ ವಹಿಸಬೇಕು. ಅಂತಹ ಫಾರಂಗಳ ಸಂಪರ್ಕಕ್ಕೆ ಬಂದಲ್ಲಿ ತಕ್ಷಣ ಕೈಕಾಲು ಮತ್ತು ಮುಖ ತೊಳೆದುಕೊಂಡು ಬಟ್ಟೆ ಬದಲಾಯಿಸಿಕೊಳ್ಳಬೇಕು. ಜ್ವರದ ಲಕ್ಷಣ ಕಾಣಿಸಿದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು ಎಂದು ಹೇಳಲಾಗಿದೆ.