ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರು ಸೇವಾ ಶುಲ್ಕ ಪಾವತಿಸುವುದು ಸ್ವಯಂ ಪ್ರೇರಿತ ಹಾಗೂ ಸಂಪೂರ್ಣ ವಿವೇಚನೆಯಿಂದ ಕೂಡಿದೆ ಎಂದು ಕೇಂದ್ರ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದ್ದು, ಇದರ ಮಧ್ಯೆ ಕೆಲ ರೆಸ್ಟೋರೆಂಟ್ಗಳು ಒತ್ತಾಯಪೂರ್ವಕವಾಗಿ ಸೇವಾ ಶುಲ್ಕ ಪಡೆಯುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ರೀತಿ ಗ್ರಾಹಕರಿಂದ ಸೇವಾ ಶುಲ್ಕ ಪಡೆದ ರೆಸ್ಟೋರೆಂಟ್ ಒಂದಕ್ಕೆ ಈಗ ದುಬಾರಿ ದಂಡ ವಿಧಿಸಲಾಗಿದೆ.
ಪ್ರಕರಣದ ವಿವರ: ಮುಂಬೈನ ಫ್ರಾಂಕ್ ಎಂಬವರು 2019ರ ಮಾರ್ಚ್ 2ರಂದು ತಮ್ಮ ಸ್ನೇಹಿತನ ಜೊತೆ ಮಲಾಡ್ ನಲ್ಲಿರುವ ಚಿಲ್ಲಿಸ್ ಅಮೆರಿಕನ್ ಗ್ರಿಲ್ ಮತ್ತು ಬಾರ್ ರೆಸ್ಟೋರೆಂಟ್ ಗೆ ತೆರಳಿದ್ದರು. ಈ ವೇಳೆ ಅವರು ಬಿಯರ್ ಮಗ್ ಜೊತೆಗೆ ಚಿಕನ್ ಆರ್ಡರ್ ಮಾಡಿದ್ದು, ಆದರೆ ಚಿಕನ್ ಕೆಟ್ಟ ವಾಸನೆ ಬರುತ್ತಿದ್ದ ಕಾರಣ ತಿರಸ್ಕರಿಸಿದ್ದರು.
ಈ ಸಂದರ್ಭದಲ್ಲಿ ಕ್ಷಮೆ ಯಾಚಿಸಿದ ಸಿಬ್ಬಂದಿ ಮತ್ತೊಂದು ಚಿಕನ್ ಕೊಟ್ಟಿದ್ದು, ಅದು ಕೂಡ ಚೆನ್ನಾಗಿರಲಿಲ್ಲ. ಹೀಗಾಗಿ ಅವರು ಬಿಲ್ ಮೊತ್ತ 16,901 ರೂಪಾಯಿಗಳನ್ನು ಪಾವತಿಸಿ ತೆರಳಲು ಮುಂದಾಗಿದ್ದು, ಬಿಲ್ ಬಂದಾಗ ಅವರಿಗೆ ಆಘಾತ ಕಾದಿತ್ತು. ಶೇಕಡ 10 ಸೇವಾ ಶುಲ್ಕವನ್ನು ಇದಕ್ಕೆ ಸೇರಿಸಿದ್ದು, ಆದರೆ ಸೇವೆ ತೃಪ್ತಿಕರವಾಗಿಲ್ಲವಾದ ಕಾರಣ ಇದನ್ನು ನೀಡಲು ಫ್ರಾಂಕ್ ನಿರಾಕರಿಸಿದ್ದರು.
ಆದರೆ ರೆಸ್ಟೋರೆಂಟ್ ಇವರಿಂದ ಬಲವಂತವಾಗಿ ಸೇವಾ ಶುಲ್ಕ ಪಡೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಗ್ರಾಹಕ ಆಯೋಗದ ಮೊರೆ ಹೋಗಿದ್ದರು. ಇದರ ವಿಚಾರಣೆ ಈಗ ನ್ಯಾಯಾಲಯದಲ್ಲಿ ನಡೆದು 10 ಸಾವಿರ ರೂಪಾಯಿ ಜೊತೆಗೆ ಸೇವಾ ಶುಲ್ಕ 169 ರೂಪಾಯಿಗಳನ್ನು ಗ್ರಾಹಕರಿಗೆ ಪಾವತಿಸುವಂತೆ ಆದೇಶ ನೀಡಲಾಗಿದೆ.