ಲಖನೌ: ಕನ್ವರ್ ಯಾತ್ರೆ ಸಾಗುವ ಮಾರ್ಗದಲ್ಲಿನ ಹೋಟೆಲ್, ರೆಸ್ಟೋರೆಂಟ್ ಮತ್ತಿತರ ಆಹಾರ ಪದಾರ್ಥಗಳ ಅಂಗಡಿಗಳ ಮುಂದೆ ಮಾಲೀಕರ ಹೆಸರುಗಳನ್ನು ಪ್ರದರ್ಶಿಸಬೇಕೆಂದು ಮುಜಾಫರ್ ನಗರ ಜಿಲ್ಲಾ ಪೊಲೀಸರ ವಿವಾದಿತ ಆದೇಶವನ್ನು ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ಇಡೀ ರಾಜ್ಯಕ್ಕೆ ವಿಸ್ತರಣೆ ಮಾಡಿದೆ.
ಆದೇಶದ ಬೆನ್ನಲ್ಲೇ ಈಗಾಗಲೇ ಸಂಗಮ್ ಡಾಬಾ ಸಲೀಂ ಭೋಜನಾಲಯವಾಗಿದೆ. ಚಾಯ್ ಲವರ್ ಪಾಯಿಂಟ್ ಅನ್ನು ಅಹ್ಮದ್ ಟೀ ಸ್ಟಾಲ್ ಎಂದು ಮರು ನಾಮಕರಣ ಮಾಡಲಾಗಿದೆ.
ಮುಜಾಫರ್ ನಗರ ಜಿಲ್ಲಾ ಪೊಲೀಸರು ಸೋಮವಾರ ಹೊರಡಿಸಿದ್ದ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದು ಮುಸ್ಲಿಂ ವಿರೋಧಿ ಕ್ರಮವಾಗಿದೆ ಎಂದು ವಿರೋಧ ಪಕ್ಷಗಳ ನಾಯಕರು ಟೀಕಿಸಿದ್ದರು. ಈ ಆದೇಶ ಮುಸ್ಲಿಂ ವರ್ತಕರನ್ನು ಗುರಿಯಾಗಿಸಿಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ರಾಜ್ಯಾದ್ಯಂತ ಕನ್ವರ್ ಯಾತ್ರೆಯ ಮಾರ್ಗದಲ್ಲಿರುವ ಎಲ್ಲಾ ಹೋಟೆಲ್ ಗಳಿಗೆ ಈ ನಿಯಮ ಅನ್ವಯಿಸುವ ಔಪಚಾರಿಕ ಆದೇಶವನ್ನು ಶೀಘ್ರವೇ ಹೊರಡಿಸಲಾಗುವುದು ಎನ್ನಲಾಗಿದೆ.
ಗೊಂದಲ ನಿವಾರಣೆ ಉದ್ದೇಶದಿಂದ ಹೋಟೆಲ್ ಮಾಲೀಕರ ಹೆಸರನ್ನು ಪ್ರದೇಶಿಸುವಂತೆ ಮುಜಾಫರ್ ನಗರ ಪೊಲೀಸರು ಸೋಮವಾರ ಆದೇಶಿಸಿದ್ದರು. ಮುಜಾಫರ್ ನಗರ ಜಿಲ್ಲೆಯಲ್ಲಿ ಕನ್ವರ್ ಯಾತ್ರೆ ಸಾಗುವ ಸುಮಾರು 240 ಕಿಲೋಮೀಟರ್ ಮಾರ್ಗ ಇದೆ. ಸಸ್ಯಹಾರಿ ಹೋಟೆಲ್ ಗಳಲ್ಲಿ ಸಾತ್ವಿಕ ಆಹಾರ ಸಿಗುವ ಸಾಧ್ಯತೆ ಹೆಚ್ಚಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಹೇಳಿದೆ.
ಆದರೆ, ಜೆಡಿಯು, ಲೋಕ ಜನ ಶಕ್ತಿ ಪಕ್ಷ, ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಿ.ಎಸ್.ಪಿ. ಮೊದಲಾದ ಪಕ್ಷಗಳು ಈ ಕ್ರಮವನ್ನು ವಿರೋಧಿಸಿವೆ. ಇದು ಸರ್ಕಾರಿ ಪ್ರಾಯೋಜಿತ ಧರ್ಮಾಂಧತೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.