ಮಧುಮೇಹ ದೀರ್ಘಕಾಲ ಕಾಡುವಂತಹ ಕಾಯಿಲೆ. ಎಂದಿಗೂ ಸಂಪೂರ್ಣ ಗುಣಪಡಿಸಲಾಗದಂತಹ ಸಮಸ್ಯೆಯೂ ಹೌದು. ಆದರೆ ಸರಿಯಾದ ಡಯಟ್ ಮೂಲಕ ಇದನ್ನು ನಿಯಂತ್ರಣದಲ್ಲಿಡಬಹುದು. ರಕ್ತದಲ್ಲಿರುವ ಗ್ಲೂಕೋಸ್ ಅನ್ನು ಹೀರಿಕೊಳ್ಳಲು ಬೇಕಾದ ಇನ್ಸುಲಿನ್ ಅನ್ನು ದೇಹವು ಸರಿಯಾಗಿ ಉತ್ಪಾದಿಸಲು ಸಾಧ್ಯವಾಗದಿದ್ದಾಗ ಸಕ್ಕರೆ ಕಾಯಿಲೆ ಸಂಭವಿಸುತ್ತದೆ. ಸಾಮಾನ್ಯವಾಗಿ ಆನುವಂಶಿಕತೆ ಹಾಗೂ ಜೀವನಶೈಲಿಯಿಂದಾಗಿ ಸಕ್ಕರೆ ಕಾಯಿಲೆ ಆವರಿಸುತ್ತದೆ.
ಇತ್ತೀಚಿನ ಅಂಕಿಅಂಶಗಳ ಪ್ರಕಾರ ಸುಮಾರು 10 ಕೋಟಿಗೂ ಅಧಿಕ ಭಾರತೀಯರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ.ವಿಶೇಷವೆಂದರೆ ಕೆಲವು ಭಾರತೀಯ ಮಸಾಲೆಗಳಲ್ಲಿ ಮಧುಮೇಹಕ್ಕೆ ಪರಿಣಾಮಕಾರಿ ಔಷಧೀಯ ಅಂಶಗಳಿವೆ. ಇವುಗಳ ಸೇವನೆ ಮೂಲಕ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಬಹುದು.
ಶುಂಠಿ
ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ಶುಂಠಿ ತುಂಬಾ ಪರಿಣಾಮಕಾರಿ. ಶುಂಠಿಯು ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದೆ. ರೋಗಿಗಳಲ್ಲಿ ಹೈಪರ್ ಇನ್ಸುಲಿನೆಮಿಯಾವನ್ನು ನಿಯಂತ್ರಿಸುವಲ್ಲಿ ಶುಂಠಿ ಸಹಾಯಕವಾಗಿದೆ. ಇದಲ್ಲದೆ ಶುಂಠಿ ಯಕೃತ್ತು, ಮೂತ್ರಪಿಂಡ ಮತ್ತು ನರಮಂಡಲಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯುತ್ತದೆ.
ಬೆಳ್ಳುಳ್ಳಿ
ರಕ್ತದಲ್ಲಿನ ಸಕ್ಕರೆ, ಒಟ್ಟು ಕೊಲೆಸ್ಟ್ರಾಲ್ ಮತ್ತು ಲಿಪೊಪ್ರೋಟೀನ್ ಅನ್ನು ನಿರ್ವಹಿಸುವಲ್ಲಿ ಬೆಳ್ಳುಳ್ಳಿ ಬಹಳ ಪರಿಣಾಮಕಾರಿಯಾಗಿದೆ. ಬೆಳ್ಳುಳ್ಳಿಯಲ್ಲಿ ಕಂಡುಬರುವ ಅಲಿಸಿನ್ (ಬಯೋ ಆಕ್ಟಿವ್ ಸಂಯುಕ್ತ) ಮೇದೋಜ್ಜೀರಕ ಗ್ರಂಥಿಯ ಬೀಟಾ ಕೋಶಗಳ ಮೇಲೆ ಪರಿಣಾಮ ಬೀರುತ್ತದೆ, ಜೊತೆಗೆ ಇನ್ಸುಲಿನ್ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.
ದಾಲ್ಚಿನ್ನಿ
ಮಧುಮೇಹ ರೋಗಿಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ನಿಯಮಿತವಾಗಿ ದಾಲ್ಚಿನ್ನಿ ಸೇವನೆ ಮಾಡಬಹುದು. 12 ವಾರಗಳವರೆಗೆ 1 ಗ್ರಾಂ ದಾಲ್ಚಿನ್ನಿ ಸೇವಿಸಿದ್ರೆ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಇಳಿಕೆಯಾಗುತ್ತದೆ. ಟೈಪ್ 2 ಡಯಾಬಿಟಿಸ್ ರೋಗಿಗಳ ಆಕ್ಸಿಡೇಟಿವ್ ಒತ್ತಡದಲ್ಲಿ ಸುಧಾರಣೆ ಕಂಡುಬರುತ್ತದೆ.
ಮೆಂತ್ಯ
ಮೆಂತ್ಯ ಬೀಜಗಳು ಕರಗುವ ಫೈಬರ್ ಅನ್ನು ಹೊಂದಿರುತ್ತವೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ. ಮೆಂತ್ಯದಲ್ಲಿರುವ ಗ್ಯಾಲಕ್ಟೋಮನ್ನನ್ ಮತ್ತು ಟ್ರೈಗೋನೆಲ್ಲಾ ರಾಸಾಯನಿಕಗಳು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತವೆ.
ಲವಂಗ
ಲವಂಗವು ಮಧುಮೇಹ ರೋಗಿಗಳಿಗೆ ನಂಜುನಿರೋಧಕ, ಉರಿಯೂತ ನಿವಾರಕ, ನೋವು ನಿವಾರಕವಾಗಿದೆ. ಇದು ಜೀರ್ಣಕಾರಿಯೂ ಹೌದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ.