
ಸ್ಥೂಲಕಾಯತೆಯಿಂದಾಗುವ ಹತ್ತಾರು ಸಮಸ್ಯೆಗಳ ಬಗ್ಗೆ ನಮಗೆಲ್ಲ ತಿಳಿದಿದೆ. ಬೊಜ್ಜು ನಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ಮಧುಮೇಹ, ಹೃದ್ರೋಗ, ಕ್ಯಾನ್ಸರ್, ಮೂಳೆಗಳ ದೌರ್ಬಲ್ಯ, ಸಂತಾನೋತ್ಪತ್ತಿಯ ಸಮಸ್ಯೆ ಹೀಗೆ ಅನೇಕ ತೊಂದರೆಗಳು ಸ್ಥೂಲಕಾಯದಿಂದ ಬರುತ್ತವೆ. ಹಾಗಾಗಿ ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸಲು ಪ್ರಯತ್ನಿಸುವುದು ಬಹಳ ಮುಖ್ಯ.
ಸ್ಥೂಲಕಾಯವನ್ನು ತೊಡೆದುಹಾಕಲು ವ್ಯಾಯಾಮದ ಜೊತೆಗೆ ಆರೋಗ್ಯಕರ ಆಹಾರ ಮತ್ತು ಬೊಜ್ಜು ವಿರೋಧಿ ಆಹಾರವನ್ನು ಸೇವಿಸುವುದು ಮುಖ್ಯ. ಕೊಬ್ಬನ್ನು ಕಡಿಮೆ ಮಾಡಲು ಇದು ಅತ್ಯಂತ ಆರೋಗ್ಯಕರ ಮತ್ತು ನೈಸರ್ಗಿಕ ವಿಧಾನವಾಗಿದೆ. ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಕೆಳಗಿನ ಆಹಾರಗಳು ಬಹಳ ಪ್ರಯೋಜನಕಾರಿ.
ಹಸಿರು ಮೆಣಸಿನಕಾಯಿ
ಅಧ್ಯಯನದ ಪ್ರಕಾರ ಹಸಿರು ಮೆಣಸಿನಕಾಯಿ ಸೇವನೆ ಬೊಜ್ಜನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕೊಬ್ಬಿನ ಚಯಾಪಚಯವನ್ನು ಸುಧಾರಿಸುತ್ತದೆ. ತೂಕ ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿರುವವರು ಪ್ರತಿದಿನ 2-3 ಹಸಿರು ಮೆಣಸಿನಕಾಯಿಗಳನ್ನು ತಿನ್ನಬೇಕು.
ಹೆಸರುಕಾಳು
ಹೆಸರು ಕಾಳಿನಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಇ ಇರುತ್ತದೆ. ಇದು ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಫೈಬರ್ ಮತ್ತು ಪ್ರೋಟೀನ್ ಅನ್ನು ಹೊಂದಿರುತ್ತದೆ. ಆದ್ದರಿಂದ ಹೆಸರುಕಾಳು ಸೇವನೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಏಲಕ್ಕಿ
ಏಲಕ್ಕಿ ತಿಂದರೆ ದೇಹದ ಚಯಾಪಚಯ ಕ್ರಿಯೆ ಹೆಚ್ಚುತ್ತದೆ. ಇದರೊಂದಿಗೆ ಜೀರ್ಣಕ್ರಿಯೆಗೂ ಇದು ಸಹಕಾರಿ. ಆದ್ದರಿಂದ ತೂಕ ಇಳಿಸಲು ನಿಯಮಿತವಾಗಿ ಏಲಕ್ಕಿಯನ್ನು ಸೇವಿಸಬೇಕು.
ಕರಿಬೇವು
ಕರಿಬೇವಿನ ಎಲೆಗಳು ಉತ್ಕರ್ಷಣ ನಿರೋಧಕ ಮತ್ತು ಸ್ಥೂಲಕಾಯತೆಯನ್ನು ತಡೆಯುವ ಗುಣಗಳನ್ನು ಹೊಂದಿವೆ. ಕರಿಬೇವು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಜೊತೆಗೆ ದೇಹವನ್ನು ನಿರ್ವಿಷಗೊಳಿಸುತ್ತದೆ.
ಗ್ರೀನ್ ಟೀ
ಗ್ರೀನ್ ಟೀ ತೂಕ ಕಡಿಮೆ ಮಾಡಿಕೊಳ್ಳಲು ಸೂಕ್ತವಾದ ಪಾನೀಯ. ಇದನ್ನು ಸೇವಿಸುವುದರಿಂದ ತೂಕ ನಷ್ಟವು ಸಂಭವಿಸುವುದಿಲ್ಲ. ಆದರೆ ಇದು ಕೊಬ್ಬನ್ನು ಸುಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದನ್ನು ಪ್ರತಿದಿನ ಕುಡಿಯುವುದರಿಂದ ಚಯಾಪಚಯವು ಹೆಚ್ಚಾಗುತ್ತದೆ ಮತ್ತು ಹಸಿವು ಕಡಿಮೆಯಾಗುತ್ತದೆ. ಈ ಮೂಲಕ ಹೆಚ್ಹೆಚ್ಚು ತಿನ್ನುವುದನ್ನು ತಪ್ಪಿಸಬಹುದು.